ಸಿನಿವಾಣಿ

ರಾಧಿಕಾ ನಾರಾಯಣ್ ಡಬಲ್ ಖುಷಿ: ‘ಮಹಾನ್’ ಮೂಲಕ ವಿಜಯ್ ರಾಘವೇಂದ್ರಗೆ ಜೋಡಿಯಾದ ‘ರಂಗಿತರಂಗ’ ನಟಿ

ಬೆಂಗಳೂರು: ‘ಯು-ಟರ್ನ್’, ‘ಮುಂದಿನ ನಿಲ್ದಾಣ’ ಸೇರಿ ಕನ್ನಡದ 10ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರಾಧಿಕಾ ನಾರಾಯಣ್ ಸದ್ಯ ಡಬಲ್ ಖುಷಿಯಲ್ಲಿದ್ದಾರೆ. ಅವರ ಅಭಿನಯದ ಚೊಚ್ಚಲ ಸಿನಿಮಾ ‘ರಂಗಿತರಂಗ’ ಇದೇ ಜುಲೈ 4ಕ್ಕೆ ರಿ-ರಿಲೀಸ್ ಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆಯೇ, ನಟಿಯು ಮತ್ತೊಂದು ವಿಷಯಾಧಾರಿತ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಚಿತ್ರವೇ ‘ಮಹಾನ್’. ಹೌದು, ‘ರೋಮಿಯೋ’, ‘ಸ್ಟೈಲ್‌ಕಿಂಗ್’ ಖ್ಯಾತಿಯ ನಿರ್ದೇಶಕ ಪಿ.ಸಿ.ಶೇಖರ್ ‘ಬ್ಯಾಡ್’ ಬಳಿಕ ‘ಮಹಾನ್’ ಚಿತ್ರವನ್ನು ಘೋಷಿಸಿದ್ದರು. ಇದು ರೈತರ ಸಮಸ್ಯೆಗಳ ಸುತ್ತ ಇರುವ ಕಥೆಯಾಗಿದ್ದು, ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿದ್ದಾರೆ. ಆದರೆ, ಚಿತ್ರದ ನಾಯಕಿಯನ್ನು ಪರಿಚಯಿಸಿರಲಿಲ್ಲ. ಇದೀಗ, ನಾಯಕಿಯನ್ನು ಘೋಷಿಸಿದ್ದು, ಇಲ್ಲಿ ವಿಜಯ್ ರಾಘವೇಂದ್ರಗೆ ರಾಧಿಕಾ ನಾರಾಯಣ್ ಜೋಡಿಯಾಗಿದ್ದಾರೆ. ಈ ಹಿಂದೆ ಗ್ಲಾಮರ್ ಸೇರಿ ವಿಶೇಷ ಪಾತ್ರಗಳಲ್ಲಿ ಮಿಂಚಿದ್ದ ಅವರು, ಇಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಪೋಸ್ಟರ್ ಮೂಲಕ ಚಿತ್ರಂಡವು ನಟಿಯನ್ನು ಸ್ವಾಗತಿಸಿದೆ. ‘ರೈತರ ಕುರಿತಾದ ‘ಮಹಾನ್’ ಚಿತ್ರದಲ್ಲಿ ನಟಿಸಲು ನನಗೆ ಬಹಳ ಸಂತೋಷವಾಗಿದೆ. ಈ ಸಾಮಾಜಿಕ ಕಳಕಳಿ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಖುಷಿಯಿದೆ. ಇಲ್ಲಿ ನಾನು ಪಕ್ಕಾ ನಾನು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಖುಷಿಹಂಚಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ‘ದೈಜಿ’ಯಲ್ಲಿ ರಮೇಶ್ ಅರವಿಂದ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.