ಸಿನಿವಾಣಿ

ಭಟ್ಟರ ಗರಡಿಗೆ ರಚಿತಾ; ಯಶಸ್ ಸೂರ್ಯಗೆ ನಾಯಕಿ ಸಿಕ್ಕಳು..

ಬೆಂಗಳೂರು: ನಿರ್ದೇಶಕ ಯೋಗರಾಜ್ ಭಟ್ ಇತ್ತೀಚೆಗಷ್ಟೇ ‘ಗರಡಿ’ ಚಿತ್ರವನ್ನು ಘೋಷಣೆ ಮಾಡಿದ್ದರು. ಸರಳ ಮುಹೂರ್ತವನ್ನೂ ಮುಗಿಸಿಕೊಂಡಿದ್ದರು. ಸಚಿವ ಮತ್ತು ನಟ ಬಿ.ಸಿ. ಪಾಟೀಲ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಯಶಸ್ ಸೂರ್ಯ ನಾಯಕನಾಗಿಯೂ ಆಯ್ಕೆ ಆಗಿದ್ದರು. ಇದೀಗ ನಾಯಕಿಯೂ ತಂಡ ಸೇರಿಕೊಂಡಿದ್ದಾರೆ. ರಚಿತಾ ರಾಮ್ ‘ಗರಡಿ’ಯಲ್ಲಿ ಯಶಸ್​ಗೆ ಜೋಡಿಯಾಗಲಿದ್ದಾರೆ.

ಸದ್ಯ ರಚಿತಾ ಬತ್ತಳಿಕೆಯಲ್ಲಿ ಏಳೆಂಟು ಸಿನಿಮಾಗಳಿವೆ. ಆ ಪೈಕಿ, ಒಂದಷ್ಟು ಚಿತ್ರಗಳ ಶೂಟಿಂಗ್ ಮುಗಿದರೆ, ಮತ್ತೊಂದಿಷ್ಟು ಚಿತ್ರ ಬಿಡುಗಡೆಯ ಸನಿಹದಲ್ಲಿವೆ. ಇನ್ನು ಕೆಲವು ಚಿತ್ರೀಕರಣ ಹಂತದಲ್ಲಿವೆ. ಇದೀಗ ಆ ಪಟ್ಟಿಗೆ ‘ಗರಡಿ’ ಸಿನಿಮಾ ಸೇರಿಕೊಂಡಿದೆ.

2017ರಲ್ಲಿ ತೆರೆಗೆ ಬಂದ ‘ಹ್ಯಾಪಿ ನ್ಯೂ ಇಯರ್’ ಸಿನಿಮಾ ಮೂಲಕ ನಿರ್ವಣಕ್ಕಿಳಿದಿದ್ದ ನಟ, ರಾಜಕಾರಣಿ ಬಿ.ಸಿ. ಪಾಟೀಲ್, ಇದೀಗ ನಾಲ್ಕು ವರ್ಷದ ಬಳಿಕ ‘ಗರಡಿ’ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಸಹ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿದೆ. ಪಕ್ಕಾ ಹಳ್ಳಿಗಾಡಿನಲ್ಲಿ ಇಡೀ ಸಿನಿಮಾ ಸಾಗಲಿದ್ದು, ಅಷ್ಟೇ ವಿಶೇಷ ಪಾತ್ರದಲ್ಲಿ ರಚಿತಾ ಕಾಣಿಸಿಕೊಳ್ಳಲಿದ್ದಾರಂತೆ.