ಚಿತ್ರ: ಏಳುಮಲೆ
ನಿರ್ದೇಶನ: ಪುನೀತ್ ರಂಗಸ್ವಾಮಿ
ನಿರ್ಮಾಣ: ತರುಣ್ ಕಿಶೋರ್
ತಾರಾಗಣ: ರಾಣಾ, ಪ್ರಿಯಾಂಕಾ ಆಚಾರ್, ಟಿ.ಎಸ್. ನಾಗಾಭರಣ, ಕಿಶೋರ್, ರಾಕೇಶ್ ಮಯ್ಯ, ಜಗಪತಿ ಬಾಬು, ಸರ್ದಾರ್ ಸತ್ಯ ಮತ್ತಿತರರು
| ಹರ್ಷವರ್ಧನ್ ಬ್ಯಾಡನೂರು
ಅದು 2004. ಅ. 18ರ ದಸರಾ ಸಮಯ. ಟೂರಿಸ್ಟ್ ವಾಹನದ ಚಾಲಕ ಹರೀಶ (ರಾಣಾ) ಅನಾಥ. ಮೈಸೂರಿಗೆ ಓದಲು ಬಂದ ತಮಿಳುನಾಡಿನ ಸೇಲಂ ಹುಡುಗಿ ರೇವತಿಗೂ (ಪ್ರಿಯಾಂಕಾ), ಹರೀಶನಿಗೂ ಮೂರು ವರ್ಷಗಳ ಪ್ರೀತಿ. ರೇವತಿ ಮನೆಯಲ್ಲಿ ವಿಷಯ ತಿಳಿದು, ಮದುವೆ ಫಿಕ್ಸ್ ಮಾಡಿರುತ್ತಾರೆ. ಅ.19ಕ್ಕೆ ಮದುವೆ. ಆದರೆ, ಅ.18ರ ರಾತ್ರಿಯೇ ಆಕೆ ಮನೆ ತೊರೆದು, ಮಲೆಮಹದೇಶ್ವರ ಬಸ್ ಹತ್ತುತ್ತಾಳೆ. ಮತ್ತೊಂದೆಡೆ ಕ್ಯಾಬ್ನಲ್ಲಿ ಪ್ರವಾಸಿಗರನ್ನು ಊಟಿ ಟ್ರಿಪ್ಗೆ ಕರೆದೊಯ್ದಿರುವ ಹರೀಶ, ಅವರನ್ನು ಮೈಸೂರಿನಲ್ಲಿ ಬಿಟ್ಟು ಮಲೆಮಹದೇಶ್ವರಕ್ಕೆ ಹೊರಡುತ್ತಾನೆ. ರೇವತಿ ಮನೆಯವರು ಆಕೆಗಾಗಿ ಹುಡುಕಾಟ ನಡೆಸತೊಡಗುತ್ತಾರೆ. ಮತ್ತೊಂದೆಡೆ ಎಲ್ಟಿಟಿಐ ಸಂಟನೆಯ ಸ್ಮಗ್ಲರ್ಗಳು ಕಾಡುಗಳ್ಳ ವೀರನಿಗೆ ಎಕೆ 47 ಶಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುತ್ತಾರೆ. ಇನ್ನೊಂದೆಡೆ ಮಲೆಮಹದೇಶ್ವರ ಪೊಲೀಸ್ ಠಾಣೆಯಲ್ಲಿ ನಡೆಯಬಾರದ ಟನೆಯೊಂದು ನಡೆದುಹೋಗುತ್ತದೆ. ಮಗದೊಂದೆಡೆ ಕಾಡುಗಳ್ಳನನ್ನು ಹಿಡಿಯಲು ಅದೇ ರಾತ್ರಿ ಎಸ್ಟಿಎಫ್ ಆಪರೇಷನ್ ಕುಕೂನ್ ಪ್ಲ್ಯಾನ್ ಮಾಡಿರುತ್ತದೆ. ಈ ಎಲ್ಲ ಬೆಳವಣಿಗೆಗಳಿಂದ ಪರಿಸ್ಥಿತಿಯ ಕೈಗೊಂಬೆಯಾಗುವ ಪ್ರೇಮಿಗಳು ಆ ಕರಾಳ ರಾತ್ರಿಯ ಏಳು ತಾಸುಗಳಲ್ಲಿ ಏಳು ಜನ್ಮಕ್ಕಾಗುವಷ್ಟು ಯಾತನೆಗಳಿಗೆ ಸಾಕ್ಷಿಯಾಗುತ್ತಾರೆ. ಹಾಗಾದರೆ ಅವರು ಒಂದಾಗುತ್ತಾರಾ? ಪೊಲೀಸ್ ಠಾಣೆಯಲ್ಲಿ ಅಂಥದ್ದೇನು ನಡೆಯಿತು? ಆಪರೇಷನ್ ಕುಕೂನ್ ಹೇಗಾಯಿತು? ಎಲ್ಲ ಪ್ರಶ್ನೆಗಳಿಗೂ "ಏಳುಮಲೆ'ಯ ಥ್ರಿಲ್ಲಿಂಗ್ ಜರ್ನಿಯಲ್ಲಿ ಉತ್ತರವಿದೆ.
ಪುನೀತ್ ರಂಗಸ್ವಾಮಿ ಚೊಚ್ಚಲ ಪ್ರಯತ್ನದಲ್ಲಿಯೇ ಒಂದೊಳ್ಳೆ ಸಿನಿಮಾ ಮಾಡಿದ್ದಾರೆ. ನೈಜ ಟನೆಗೆ ಮೂರ್ನಾಲ್ಕು ಕಾಲ್ಪನಿಕ ಕಥೆಗಳನ್ನು ಸೇರಿಸಿ, ಎಲ್ಲ ಕಥೆಗಳನ್ನೂ ಒಂದಲ್ಲಾ ಒಂದು ರೀತಿ ಲಿಂಕ್ ಮಾಡಿರುವ ರೀತಿ ಮೆಚ್ಚುವಂತಿದೆ. ರೊಮ್ಯಾಂಟಿಕ್ ಪಯಣದಲ್ಲಿ ಥ್ರಿಲ್ಲಿಂಗ್ ಅಂಶಗಳೇ ಹೆಚ್ಚಿರುವ ಕಾರಣ, 133 ನಿಮಿಷಗಳ ಈ "ಏಳುಮಲೆ' ಎಲ್ಲೂ ಬೋರ್ ಅನ್ನಿಸುವುದಿಲ್ಲ. ಕಥೆ ಪ್ರಾರಂಭದಲ್ಲಿ ನಿಧಾನ ಅಂತನ್ನಿಸಿದರೂ ರಾಣಾ ಕ್ರಮೇಣ ರಣರಂಗವನ್ನೇ ಸೃಷ್ಟಿಸಿದ್ದಾರೆ. ಅಮಾಯಕ ಹರೀಶ ಪಾತ್ರವನ್ನು ಜೀವಿಸಿದ್ದಾರೆ. ಅವರಿಗೆ "ಮಹಾನಟಿ' ಪ್ರಿಯಾಂಕಾ ಕೂಡ ಸಮನಾಗಿ ಸಾಥ್ ನೀಡಿದ್ದಾರೆ. ಕಿಶೋರ್, ಜಗಪ್ಪ, ನಾಗಾಭರಣ ಪಾತ್ರಗಳು ಗಮನ ಸೆಳೆಯುತ್ತವೆ. ಕರ್ನಾಟಕ, ತಮಿಳುನಾಡು ಗಡಿಯ ಕನ್ನಡ ಮತ್ತು ತಮಿಳು ಭಾಷೆಗಳನ್ನೇ ಬಳಸಿಕೊಳ್ಳಲಾಗಿದೆ. ಜತೆಗೆ ಕ್ವಾಲಿಸ್ ಕಾರು, 50 ದಿನ ಪೂರೈಸಿದ "ಆಪ್ತಮಿತ್ರ' ಸಿನಿಮಾ ಪೋಸ್ಟರ್ಗಳು, ಕಾಯಿನ್ ಫೋನ್, ರಿಲಯನ್ಸ್ ಮೊಬೈಲ್.. ಹೀಗೆ 2004ರ ಕಾಲಟ್ಟಕ್ಕೆ ಹತ್ತಿರವಾಗಿಸಲು ತಂಡ ಸಾಕಷ್ಟು ಮುತುವರ್ಜಿ ವಹಿಸಿದೆ. ಬಹುತೇಕ ಕತ್ತಲಲ್ಲೇ ಸಾಗುವ ಕಥೆಯನ್ನು ಅದ್ವೈತ್ ಗುರುಮೂರ್ತಿ ತೆರೆಯ ಮೇಲೆ ಅಂದವಾಗಿಸಿದ್ದಾರೆ. ಡಿ. ಇಮ್ಮಾನ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಎರಡೂ ಚಿತ್ರಕ್ಕೆ ಪ್ಲಸ್ ಆಗಿವೆ.
STAR: ****