ಬಹುತಾರಾಗಣ, ಹೈ-ಬಜೆಟ್‌ನಲ್ಲಿ ಮೂಡಿಬರುತ್ತಿರುವ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಕಾಂಬಿನೇಷನ್‌ನ ಸೈ-ಫೈ ‘ರಾಕಾ’ ಚಿತ್ರವು ಬಿಡುಗಡೆಗೂ ಮುನ್ನವೇ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಸಿನಿಮಾ ತಂತ್ರಜ್ಞಾನದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿ, ಪ್ರತಿಷ್ಠಿತ ಗಿನ್ನೆಸ್ ವಿಶ್ವ ದಾಖಲೆಗೆ ಭಾಜನವಾಗಿದೆ. ಏಕಕಾಲಕ್ಕೆ ಗರಿಷ್ಠ ಸಂಖ್ಯೆಯ ಕಲಾವಿದರನ್ನು ಮೋಷನ್-ಕ್ಯಾಪ್ಚರ್ ಮೂಲಕ ಸೆರೆಹಿಡಿದು ದಾಖಲೆ ನಿರ್ಮಿಸಿದೆ. ಇದೇ ಫೆಬ್ರವರಿಯಲ್ಲಿ ಚಿತ್ರತಂಡ ಬರೋಬ್ಬರಿ 37 ಕಲಾವಿದರನ್ನು ರಿಯಲ್-ಟೈಮ್‌ನಲ್ಲಿ ಸೆರೆಹಿಡಿದು ಅಭೂತಪೂರ್ವ ಸಾಧನೆ ಮಾಡಿದೆ. ಸೆ.15ರಂದು ಗಿನ್ನೆಸ್ ವಿಶ್ವದಾಖಲೆಯ ಭಾರತದ ತೀರ್ಪುಗಾರ ಸ್ವಪ್ನಿಲ್ ಡಂಗರಿಕರ್, ಅಲ್ಲು ಅರ್ಜುನ್ ಮತ್ತು ಅಟ್ಲೀಗೆ ಇತ್ತೀಚೆಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ. ಇನ್ನು ಮೋಷನ್-ಕ್ಯಾಪ್ಚರ್ ಪ್ರಕ್ರಿಯೆಯು ಸವಾಲಿನಿಂದ ಕೂಡಿತ್ತು ಎಂದು ಹೇಳಿಕೊಂಡಿರುವ ಚಿತ್ರತಂಡ, ‘4 ವರ್ಷದ ಪುಟ್ಟ ಮಗುವಿನಿಂದ ಹಿಡಿದು 70 ವರ್ಷದ ಹಿರಿಯರು ಸೇರಿ ಒಟ್ಟು 37 ಕಲಾವಿದರು ಇದರಲ್ಲಿ ಭಾಗವಹಿಸಿದ್ದರು. ಸಿಂಗಲ್ ಮೋಷನ್ ಕ್ಯಾಪ್ಚರ್‌ನಲ್ಲಿ ಪ್ರತಿ ಕಲಾವಿದರ ಮುಖಭಾವ, ದೇಹಭಾಷೆ, ಅಭಿನಯ ತಪ್ಪಿಹೋಗದಂತೆ ನೈಜವಾಗಿ ಸೆರೆಹಿಡಿಯುವುದು ಸವಾಲಿನ ಕೆಲಸ. ಈ ಸಾಧನೆಗಾಗಿ ಬರೋಬ್ಬರಿ 92 ಅತ್ಯಾಧುನಿಕ ಆಪ್ಟಿಕಲ್ ಮೋಷನ್-ಕ್ಯಾಪ್ಚರ್ ಕ್ಯಾಮರಾಗಳು, ಹಾಲಿವುಡ್ ಮಟ್ಟದ ಸೆಟ್ ನಿರ್ಮಿಸಲಾಗಿತ್ತು. ಈ ನೂತನ ದಾಖಲೆಯು ‘ರಾಕಾ’ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ’ ಎಂದಿದೆ. ಅಲ್ಲು ಅರ್ಜುನ್ ಜತೆಗೆ ದೀಪಿಕಾ ಪಡುಕೋಣೆ ಸೇರಿ ಬಾಲಿವುಡ್, ಹಾಲಿವುಡ್ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 2027ಕ್ಕೆ ‘ರಾಕಾ’ ತೆರೆಗೆ ಬರಲಿದೆ. -ಏಜೆನ್ಸೀಸ್