ಬೆಂಗಳೂರು: ‘ಬಿಗ್ ಬಾಸ್’ನ ಒಂಬತ್ತನೇ ಸೀಸನ್ ಯಾವಾಗ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇತ್ತು. ಆ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಈ ಜನಪ್ರಿಯ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈಗಾಗಲೇ ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ಬಾಸ್ ಮನೆಯ ನವೀಕರಣ ನಡೆಯುತ್ತಿದೆ. ಇಷ್ಟೇ ಅಲ್ಲದೆ, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಪ್ರೋಮೋ ಶೂಟ್ ಸಹ ಪೂರ್ಣಗೊಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕಲರ್ಸ್ ಕನ್ನಡದ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ಬಾಸ್ ಮನೆ ಒಂದು ಭಾಗದ ಫೋಟೋವೊಂದನ್ನು ತಮ್ಮ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ನಿರ್ಮಾಣ ಹಂತದಲ್ಲಿದೆ ಎಂದು ಶೀರ್ಷಿಕೆ ನೀಡಿದ್ದರು. ಕಿಚ್ಚ ಸುದೀಪ್ ಅವರು ಪ್ರೋಮೋ ಶೂಟ್ನಲ್ಲಿ ಭಾಗಿಯಾಗಿ ಬಂದ ಬಳಿಕ ಅವರು ಸಹ ಟ್ವೀಟ್ ಮಾಡಿದ್ದಾರೆ. ಬಿಗ್ಬಾಸ್ ಹೊಸ ಸೀಸನ್ಗಾಗಿ ಅತ್ಯಾಕರ್ಷಕ ಪ್ರೋಮೋ ಶೂಟ್ ಮಾಡಲಾಗಿದೆ. ಇಡೀ ತಂಡದ ಶ್ರಮಕ್ಕೆ ಹಾಗೂ ಈ ಶೂಟ್ನಲ್ಲಿ ಭಾಗವಹಿಸಿದ್ದ ಎಲ್ಲ ಪ್ರೀತಿಯ ಜನರಿಗೆ ಧನ್ಯವಾದಗಳು. ನೀವೆಲ್ಲ ಆದಷ್ಟು ಬೇಗ ಪ್ರೋಮೋವನ್ನು ಎದುರು ನೋಡಲಿದ್ದೀರಿ. ಇದು ಸೂಪರ್ ಘೋಷಣೆ ಎಂದಿದ್ದಾರೆ.
ಬಿಗ್ಬಾಸ್-9 ಆರಂಭವಾಗುವುದು ಖಚಿತವಾಗಿದ್ದು, ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ತಾಜಾ ವಿಚಾರ ಏನೆಂದರೆ, ಮೂಲಗಳ ಪ್ರಕಾರ ಬಿಗ್ಬಾಸ್ ಆಯೋಜಕರು ಈ ಬಾರಿ ಹೊಸ ಪ್ರಯತ್ನದೊಂದಿಗೆ ಜನರ ಗಮನ ಸೆಳೆಯಲು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಬಿಗ್ಬಾಸ್ ಸೀಸನ್ 8ರಲ್ಲಿ ಅನೇಕ ಹೊಸ ಟಾಸ್ಕ್ಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ಇದು ವೀಕ್ಷಕರಿಗೆ ಬಹಳ ಖುಷಿಯನ್ನು ತಂದುಕೊಟ್ಟಿತ್ತು. ಇದನ್ನು ನೋಡಿ ತೆಲುಗು ಬಿಗ್ಬಾಸ್ ಕೂಡ ಒಂದಿಷ್ಟು ಟಾಸ್ಕ್ಗಳನ್ನು ಕಾಪಿ ಮಾಡಿತ್ತು.
ಇದೀಗ ಬಿಗ್ಬಾಸ್-9ನೇ ಸೀಸನ್ನಲ್ಲಿ ಒಂದಿಷ್ಟು ಹೊಸ ಟಾಸ್ಕ್ಗಳನ್ನು ಅಳವಡಿಸಿಕೊಳ್ಳಲು ಕಲರ್ಸ್ ಕನ್ನಡ ಮುಂದಾಗಿದೆ. ಹಿಂದಿ ಬಿಗ್ಬಾಸ್ನಲ್ಲಿ ಹೆಚ್ಚು ಗಮನ ಸೆಳೆದ ಟಾಸ್ಕ್ಗಳನ್ನು ಅಳವಡಿಸಿಕೊಳ್ಳಲು ಆಯೋಜಕರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಎಂದಿನಂತೆ ಈ ಬಾರಿಯೂ ಕೂಡ ಕಳಪೆ ಮತ್ತು ಉತ್ತಮ ಪ್ರದರ್ಶನ ಟಾಸ್ಕ್ ಇರಲಿದೆ. ಏಕೆಂದರೆ, ಈ ಟಾಸ್ಕ್ ವೀಕ್ಷಕರಿಗೆ ಆಸಕ್ತಿಕರ ವಿಷಯಗಳನ್ನು ತಿಳಿಸುತ್ತಿತ್ತು.
ಈ ಬಾರಿ ಬಿಗ್ಬಾಸ್ ಮನೆಗೆ ಮಾಜಿ ಕ್ರಿಕೆಟಿಗ ವಿನಯ್ ಕುಮಾರ್, ನಟ ನವೀನ್ ಕೃಷ್ಣ, ನಿರ್ದೇಶಕ ರವಿ ಶ್ರೀವಾಸ್ತವ, ನಟ ತರುಣ್ ಚಂದ್ರ, ಕಿರುತೆರೆ ನಟಿ ನಮ್ರತಾ ಗೌಡ, ನಟ ದಿಲೀಪ್ ರಾಜ್, ಹಿರಿಯ ನಟಿ ಪ್ರೇಮಾ, ಸೋಶಿಯಲ್ ಮೀಡಿಯಾ ಸ್ಟಾರ್ ಭೂಮಿಕಾ, ನಟಿ ರೇಖಾ ವೇದವ್ಯಾಸ್, ಮಿಮಿಕ್ರಿ ಗೋಪಿ ಮತ್ತು ಟಿವಿ ನಿರೂಪಕ ಚಂದನ್ ಶರ್ಮಾ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)