ಬೆಂಗಳೂರು: ನೂರು ಕೋಟಿ ರೂ. ಒಟಿಟಿ ಆಫರ್ ತಿರಸ್ಕರಿಸಿರುವ "ವಿಕ್ರಾಂತ್ ರೋಣ" ಸಿನಿಮಾ ತಂಡ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ. ಕರೊನಾ ಭೀತಿಯಿಂದ ಹೆದರಿರುವ ಅನೇಕ ಚಿತ್ರತಂಡದವರು ಒಟಿಟಿ ಬಿಡುಗಡೆಯನ್ನು ಎದುರು ನೋಡುತ್ತಿರುವಾಗ ವಿಕ್ರಾಂತ್ ರೋಣ ಸಿನಿಮಾ ತಂಡ ಒಟಿಟಿ ಆಫರ್ ತಿರಸ್ಕರಿಸಿರುವುದು ಅಚ್ಚರಿ ಎನಿಸಿದರೂ, ಅದಕ್ಕೊಂದು ಕಾರಣವೂ ಇದೆ.
ಅಂದಹಾಗೆ ವಿಕ್ರಾಂತ್ ರೋಣ 50 ದೇಶಗಳಲ್ಲಿ ಬಿಡುಗಡೆಯಾಗಲಿರುವ ಪ್ಯಾನ್ ವರ್ಲ್ಡ್ 3ಡಿ ಸಿನಿಮಾ. ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಬುರ್ಜ್ ಖಲೀಫಾ ಮೇಲೆ ಟೈಟಲ್ ಲಾಂಚ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಚಿತ್ರತಂಡ ಸೇರಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.
ಮೂಲಗಳ ಪ್ರಕಾರ ಸಿನಿಮಾ ತಂಡ ಇತ್ತೀಚೆಗೆ ಅತಿದೊಡ್ಡ ಒಟಿಟಿ ಕಂಪನಿಗಳಿಗೆ ಖಾಸಗಿಯಾಗಿ ಶೋ ಏರ್ಪಡಿಸಿದೆ. ವಿಕ್ರಾಂತ್ ರೋಣ ಚಿತ್ರವನ್ನು ನೋಡಿದವರು ಅದರ ಮೇಕಿಂಗ್, ವಿಷುವಲ್ ಕ್ವಾಲಿಟಿ ಮತ್ತು ಕಿಚ್ಚ ಸುದೀಪ್ ನಟನೆಗೆ ಫಿದಾ ಆಗಿದ್ದಾರೆ. ಚಿತ್ರದ ವಿಷುವಲ್ಸ್ ಹಾಲಿವುಡ್ ಗುಣಮಟ್ಟದಲ್ಲಿದೆ. ಭಾರತೀಯ ಚಲನಚಿತ್ರೋದ್ಯಮದಲ್ಲಿ ಇದುವರೆಗೂ ಈ ಪ್ರಕಾರದ ಅನ್ವೇಷಣೆ ನಡೆದಿಲ್ಲ ಎನ್ನುತ್ತಾರೆ ಚಿತ್ರ ವೀಕ್ಷಿಸಿದ ಒಟಿಟಿ ಅವರು.
ಇನ್ನು ಕಿಂಗ್ ಕಿಚ್ಚ ಸುದೀಪ್ ನಟನೆಗೂ ಫಿದಾ ಆಗಿದ್ದಾರೆ. ಈ ದಶಕದಲ್ಲೇ ಅತ್ಯಂತ ಅದ್ಭುತ ಪ್ರದರ್ಶನವನ್ನು ಸುದೀಪ್ ಅವರು ನೀಡಿದ್ದಾರಂತೆ. ಇದೆಲ್ಲವನ್ನೂ ಪರಿಗಣಿಸಿ ಒಟಿಟಿ ಕಂಪನಿ 100 ಕೋಟಿ ಆಫರ್ ಮಾಡಿದೆ. ಆದರೆ, ಚಿತ್ರತಂಡ ಅದನ್ನು ನಿರಾಕರಿಸಿದ್ದು, ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲು ಮುಂದಾಗಿದೆ. ಏಕೆಂದರೆ, ಚಿತ್ರ 3ಡಿಯಲ್ಲಿ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಈ ಚಿತ್ರ ಒಂದು ರೀತಿಯ ವಿಭಿನ್ನ ಅನುಭವ ನೀಡಲಿದೆ ಎಂಬುದು ಚಿತ್ರತಂಡದ ಬಲವಾದ ನಂಬಿಕೆಯಾಗಿದೆ.
ಇನ್ನು ಒಟಿಟಿ ಆಫರ್ ಬಗ್ಗೆ ಮಾತನಾಡಿರುವ ನಿರ್ಮಾಪಕ ಜಾಕ್ ಮಂಜು, ಹೌದು ಆಫರ್ ಬಂದಿದ್ದು ನಿಜ. ಆದರೆ, ವಿಕ್ರಾಂತ್ ರೋಣ ಬೆಳ್ಳಿ ಪರದೆಯ ಮೇಲೆಯೇ ರಾರಾಜಿಸಲಿದೆ. ನಾನು ವೈಯಕ್ತಿಕವಾಗಿ ನೋಡಿದ ದೃಶ್ಯಗಳು ದೊಡ್ಡ ಪರದೆಯ ಮೇಲೆ ಕುಟುಂಬಗಳು ಮತ್ತು ಮಕ್ಕಳು ಆನಂದಿಸುವ ವಿಷಯವಾಗಿದೆ. ಅಲ್ಲದೆ, 3ಡಿ ಅನುಭವವು ಪ್ರೇಕ್ಷಕರಿಗೆ ಹೆಚ್ಚಿನದನ್ನು ಬಯಸುತ್ತದೆ. ಇದು ಪ್ರೇಕ್ಷಕರಿಗೆ ನೀಡುವ ಸಿನಿಮೀಯ ಅನುಭವಕ್ಕಾಗಿ ದೇಶದ ಅತಿದೊಡ್ಡ ಪರದೆಗಳಿಗೆ ಅರ್ಹವಾದ ಚಿತ್ರವಾಗಿದೆ ಎಂದು ಹೇಳಿದ್ದಾರೆ.
ಇನ್ನು ವಿಕ್ರಾಂತ್ ರೋಣ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಒಟಿಟಿ ಆಫರ್ ಕೇಳಿ ಅನುಪ್ ಭಂಡಾರಿ ಕೂಡ ಖುಷಿಯಾಗಿದ್ದಾರೆ. ನಿಜಕ್ಕೂ ಇದೊಂದು ಶ್ರೇಷ್ಠ ಆಫರ್. ಚಿತ್ರಕ್ಕೆ ತಕ್ಕ ರೀತಿಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿರುವುದಕ್ಕೆ ಖುಷಿಯಾಗಿದೆ. ಚಿತ್ರದ 3ಡಿ ಆವೃತ್ತಿಯು ನಿಜವಾಗಿಯೂ ಉತ್ತಮವಾಗಿ ರೂಪುಗೊಂಡಿದೆ ಮತ್ತು ಇದು ದೊಡ್ಡ ಪರದೆಯ ಮೇಲೆ ಪ್ರೇಕ್ಷಕರಿಗೆ ಒಂದು ಅನುಭವವನ್ನು ನೀಡುತ್ತದೆ. ಯಾವುದೇ ಚಿತ್ರದ ನಿರ್ಮಾಪಕರು, ಪ್ರೇಕ್ಷಕರು ಚಿತ್ರವನ್ನು ತಾನು ಕಲ್ಪಿಸಿಕೊಂಡ ರೀತಿಯಲ್ಲಿ ಆನಂದಿಸಬೇಕೆಂದು ಬಯಸುತ್ತಾರೆ ಮತ್ತು ತಂಡವು ಸಹ ಅದೇ ರೀತಿ ಭಾವಿಸುತ್ತದೆ ಎಂದು ಅನುಪ್ ಭಂಡಾರಿ ತಿಳಿಸಿದ್ದಾರೆ.
ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ನಟಿಸಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಶಾಲಿನಿ ಆರ್ಟ್ಸ್ ಪ್ರೊಡಕ್ಷನ್ ಅಡಿಯಲ್ಲಿ ಜೀ ಸ್ಟುಡಿಯೋಸ್ ಚಿತ್ರವನ್ನು ಅರ್ಪಿಸುತ್ತಿದೆ. ಚಿತ್ರಕ್ಕೆ ಅಲಂಕಾರ್ ಪಾಂಡಿಯನ್ ಸಹ ನಿರ್ಮಾಣವಿದೆ. ಅನುಪ್ ಭಂಡಾರಿ ಅವರು ನಿರ್ದೇಶಿಸಿದ್ದು, ಫೆ. 24ಕ್ಕೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಪ್ರಸ್ತುತ ಇರುವ ಕೋವಿಡ್ ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಲಿದೆ. (ಏಜೆನ್ಸೀಸ್)