ಮುಂಬೈ: ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಬಾಲಿವುಡ್ ನಟ ವಿಕ್ಕಿ ಕೌಶಾಲ್ ಮತ್ತು ನಟಿ ಸಾರಾ ಅಲಿ ಖಾನ್ ವಿರುದ್ಧ ದೂರು ದಾಖಲಿಸಿದ್ದಾರೆ. ಸಿನಿಮಾದಲ್ಲಿ ಅಕ್ರಮವಾಗಿ ತನ್ನ ಬೈಕ್ ನಂಬರ್ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಂದೋರ್ ನಿವಾಸಿ ಜೈ ಸಿಂಗ್ ಯಾದವ್, ಸಿನಿಮಾದಲ್ಲಿ ಬಳಸಲಾಗಿರುವ ಬೈಕ್ನಲ್ಲಿರುವ ನಂಬರ್ ನನ್ನ ಬೈಕ್ ನಂಬರ್ ಆಗಿದೆ. ಅದು ಸಿನಿಮಾ ತಂಡಕ್ಕೆ ತಿಳಿದಿದೆಯೋ? ಇಲ್ಲವೋ? ನನಗೆ ಗೊತ್ತಿಲ್ಲ. ಆದರೆ, ಅವರು ನಂಬರ್ ಬಳಸಿಕೊಂಡಿರುವುದು ಅಕ್ರಮ ಎಂದು ನಿನ್ನೆ (ಜ.1) ನೀಡಿದ ದೂರಿನಲ್ಲಿ ಉಲ್ಲೇಖಸಿದ್ದಾರೆ.
ನನ್ನ ಅನುಮತಿ ಇಲ್ಲದೇ ಅವರು ನನ್ನ ನಂಬರ್ ಬಳಸಿಕೊಂಡಿದ್ದಾರೆ. ನಾನು ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಈ ಸಂಬಂಧ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಿದರು.
ಪ್ರಕರಣ ಸಂಬಂಧ ಮಾತನಾಡಿರುವ ಇಂದೋರ್ನ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಸೋನಿ, ದೂರನ್ನು ಸ್ವೀಕರಿಸಿದ್ದೇನೆ. ಅವರು ನಂಬರ್ ಪ್ಲೇಟ್ ಅಕ್ರಮವಾಗಿ ಬಳಸಿದ್ದಾರೆಯೇ ಎಂದು ನೋಡುತ್ತೇವೆ. ಬಳಿಕ ಮೋಟಾರು ವಾಹನ ಕಾಯ್ದೆಯ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ತಮ್ಮ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ವಿಕ್ಕಿ ಮತ್ತು ಸಾರಾ ಇತ್ತೀಚೆಗಷ್ಟೇ ಇಂದೋರ್ನಲ್ಲಿ ಕಾಣಿಸಿಕೊಂಡಿದ್ದರು. ಮದುವೆ ಬಳಿಕ ವಿಕ್ಕಿ ಮತ್ತೆ ಸಿನಿಮಾ ಚಟುವಟಿಕೆಯತ್ತ ಗಮನ ಹರಿಸಿದ್ದಾರೆ. ಕೊನೆಯದಾಗಿ ಸರ್ದಾರ್ ಉಧಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಸಾರಾ ಕೂಡ ಕೊನೆಯದಾಗಿ ಅತ್ರಂಗಿ ರೇ ಚಿತ್ರದಲ್ಲಿ ನಟಿಸಿದ್ದರು. (ಏಜೆನ್ಸೀಸ್)