ಸಿನಿವಾಣಿ

ತೆಲುಗಿನ ಖ್ಯಾತ ಉದ್ಯಮಿ ನನ್ನ ತಂದೆ ಅಂದ ನಟಿ ಶ್ರೀಲೀಲಾಗೆ ಎದುರಾಯ್ತು ಸಂಕಷ್ಟ..!

ಹೈದರಾಬಾದ್​: ತೆಲುಗಿನ ಖ್ಯಾತ ಉದ್ಯಮಿ ಸೂರಪನೇನಿ ಸುಭಾಕರ ರಾವ್​ ಅವರು ನಮ್ಮ ತಂದೆ ಅಂದಿರುವ ನಟಿ ಶ್ರೀಲೀಲಾಗೆ ಇದೀಗ ಸಂಕಷ್ಟ ಎದುರಾಗಿದ್ದು, ಟಾಲಿವುಡ್​ ಮೊದಲ ಸಿನಿಮಾದಲ್ಲೇ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕಿಸ್​ ಹಾಗೂ ಭರಾಟೆ ಸಿನಿಮಾಗಳಿಂದ ಕನ್ನಡಿಗರ ಮನಗೆದ್ದಿರುವ ನಟಿ ಶ್ರೀಲೀಲಾ, ಇದೀಗ ವೈಯಕ್ತಿಕ ವಿಚಾರಗಳಿಂದ ವಿವಾದಕ್ಕೆ ಗುರಿಯಾಗಿದ್ದಾರೆ. ಮೊನ್ನೆ ತೆರೆಕಂಡಿರುವ ಪೆಳ್ಳಿಸಂದ ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೂ ಶ್ರೀಲೀಲಾ ಪಾದರ್ಪಣೆ ಮಾಡಿದ್ದಾರೆ. ಪೆಳ್ಳಿಸಂದ ಡಿ ಚಿತ್ರ ಒಳ್ಳೆಯ ಆರಂಭ ಪಡೆದುಕೊಂಡಿದ್ದು, ಶ್ರೀಲೀಲಾರ ಬ್ಯೂಟಿ ಮತ್ತು ಡ್ಯಾನ್ಸ್​ಗೆ ತೆಲುಗು ಚಿತ್ರರಂಗದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾ ಬಿಡುಗಡೆ ಒಂದು ಕಡೆಯಾದರೆ, ಶ್ರೀಲೀಲಾ ಇದೀಗ ವೈಯಕ್ತಿಯ ವಿಚಾರದಿಂದ ಭಾರೀ ಸುದ್ದಿಯಾಗಿದ್ದಾರೆ. ಸಿನಿಮಾ ಕುರಿತ ಸುದ್ದಿಗೋಷ್ಠಿಯಲ್ಲಿ ನಟಿ ಶ್ರೀಲೀಲಾ ಅವರು ತೆಲುಗಿನ ಖ್ಯಾತ ಉದ್ಯಮಿ ಸೂರಪನೇನಿ ಸುಭಾಕರ ರಾವ್​ ಅವರು ನನ್ನ ತಂದೆ ಎಂದು ಹೇಳಿಕೊಂಡಿದ್ದರು. ಇದು ಸಾಕಷ್ಟು ಸುದ್ದಿಯಾಯಿತು.

ಈ ವರದಿಗಳನ್ನು ನೋಡಿದ ಬೆನ್ನಲ್ಲೇ ಸುಭಾಕರ ರಾವ್​ ಮಾಧ್ಯಮಗಳ ಮುಂದೆ ಬಂದು ಶ್ರೀಲೀಲಾ ನನ್ನ ಮಗಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ಪತ್ನಿಯ ಜತೆ ಡಿವೋರ್ಸ್​ ಆದ ಬಳಿಕ ಆಕೆ ಶ್ರೀಲೀಲಾಗೆ ಜನ್ಮ ನೀಡಿದ್ದಾಳೆ. ಡಿವೋರ್ಸ್​ ಕೇಸ್​ ಇನ್ನು ಕೋರ್ಟಿನಲ್ಲಿ ಬಾಕಿ ಇದೆ. ನಾನು ಅವಳ ತಂದೆಯಲ್ಲ. ಶ್ರೀಲೀಲಾ ಮಾಧ್ಯಮಗಳ ಸಂದರ್ಶನದಲ್ಲಿ ನನ್ನ ಹೆಸರನ್ನು ಬಳಸುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದೆ ನನ್ನ ಹೆಸರು ಉಲ್ಲೇಖಿಸುತ್ತಿದ್ದಾರೆಂದು ಹೇಳಿದ್ದಾರೆ.

ಶ್ರೀಲೀಲಾಗೆ ಕಾನೂನು ಸಂಕಷ್ಟ

ಶ್ರೀಲೀಲಾರ ಪೆಳ್ಳಿಸಂದ ಡಿ ಚಿತ್ರದ ಪೋಸ್ಟರ್​ನಲ್ಲಿ ಸುಭಾಕರ ರಾವ್​ ಅವರು ನಟಿ ತಂದೆ ಎಂದು ಬರೆದಿರುವ ಸಂದೇಶ ವೈರಲ್​ ಆಗಿದೆ. ಇದು ಸುಭಾಕರ ರಾವ್​ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಹಿಂದೆ ಯೋಜಿತ ಪ್ರಸಾರದ ಉದ್ದೇಶವಿದೆ. ಇದೆಲ್ಲ ಯಾಕೆ ಮಾಡುತ್ತಿದ್ದಾರೆಂದು ನನಗೆ ತಿಳಿಯದು. ನನ್ನ ಹೆಸರನ್ನು ಬಳಸಿಕೊಂಡು ಆಸ್ತಿಯಲ್ಲಿ ಹಕ್ಕು ಕೇಳುವ ಹುನ್ನಾರವಿದೆ. ಈಗಾಗಲೇ ನಮ್ಮ ವಕೀಲರೆ ಜತೆ ಚರ್ಚೆ ನಡೆಸಿ, ನಟಿ ಶ್ರೀಲೀಲಾ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ ಎಂದು ಸುಭಾಕರ ರಾವ್​ ಹೇಳಿದ್ದಾರೆ.

ಇನ್ನು ಶ್ರೀಲೀಲಾ ತಾಯಿಯ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಸುಭಾಕರ ರಾವ್​, ಡಿವೋರ್ಸ್​ ಆಗಿ 20 ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆ ಬಳಿಕವಷ್ಟೇ ಶ್ರೀಲೀಲಾ ಜನಿಸಿರುವುದು. ಇಂದಿಗೂ ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್​ ಕೇಸ್​ ನಡೆಯುತ್ತಿದೆ. ಶ್ರೀಲೀಲಾಳ ಜತೆ ನಮಗೆ ಸಂಪರ್ಕವೇ ಇಲ್ಲ. ಮೊದಲ ಪತ್ನಿಯ ಜತೆಗಿನ ಸಂಪರ್ಕವನ್ನು ಕಡಿದುಕೊಂಡ ನಂತವಷ್ಟೇ ಶ್ರೀಲೀಲಾ ಜನಿಸಿರುವುದು. ಅವಳು ನನ್ನ ಮಗಳಲ್ಲ. ನನಗೂ-ಅವಳಿಗೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ ಯಾವುದೇ ಸುಳ್ಳು ಸುದ್ದಿಯನ್ನು ಹರಡಬೇಡಿ ಎಂದು ಸುಭಾಕರ ರಾವ್ ತಿಳಿಸಿದ್ದಾರೆ.

ಇನ್ನು ಸುಭಾಕರ ರಾವ್​ ನೀಡಿರುವ ಹೇಳಿಕೆ ಬಗ್ಗೆ ಶ್ರೀಲೀಲಾ ಹಾಗೂ ಅವರ ತಾಯಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ನಿರ್ದೇಶಕ ಎ.ಪಿ. ಅರ್ಜುನ್​ ಅವರ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಶ್ರೀಲೀಲಾ, ಮೊದಲ ಚಿತ್ರದಲ್ಲೇ ಕನ್ನಡಿಗರ ಮನಸ್ಸು ಗೆದ್ದರು. ಬಳಿಕ ಶ್ರೀ ಮುರುಳಿ ಜತೆ ಭರಾಟೆ ಚಿತ್ರದಲ್ಲಿ ನಟಿಸಿದರು. ನಿನ್ನೆ ತೆರೆಕಂಡಿರೋ ಪೆಳ್ಳಿಸಂದ ಡಿ ಚಿತ್ರದ ಮೂಲಕ ಟಾಲಿವುಡ್​ಗೂ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ. (ಏಜೆನ್ಸೀಸ್​)