ಚೆನ್ನೈ: ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಬಹುಬೇಡಿಕೆಯ ಬಹುಭಾಷಾ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ನಟನೆ, ಡಾನ್ಸ್, ಗ್ಲಾಮರ್ ಮತ್ತು ಗಾಯನದ ಮೂಲಕ ಶ್ರುತಿ ತುಂಬಾ ಮನೆ ಮಾತಾಗಿದ್ದಾರೆ. ಇನ್ನು ವೈಯಕ್ತಿಕ ವಿಚಾರದಿಂದಲೂ ಶ್ರುತಿ ಸುದ್ದಿಯಾಗಿದ್ದಾರೆ. ಎರಡು ವರ್ಷ ಡೇಟಿಂಗ್ ಮಾಡಿ ಬಾಯ್ಪ್ರೆಂಡ್ ಮೈಕಲ್ ಕೊರ್ಸಲೆ ಜತೆ ಬ್ರೇಕಪ್ ಮಾಡಿಕೊಂಡಿದ್ದರು. ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಶ್ರುತಿ, ಶಂತನು ಹಜಾರಿಕಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ.
ಇನ್ನು ಶ್ರುತಿ ಸಾಮಾಜಿಕ ಜಾಲತಾಣದಲ್ಲೂ ಸಕ್ರೀಯರಾಗಿದ್ದು, ನೆಟ್ಟಿಗರು ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಲೇ ಇರುತ್ತಾರೆ. ಅದೇ ರೀತಿಯ ನೆಟ್ಟಿಗರೊಬ್ಬರು ವೈಯಕ್ತಿಕ ಜೀವನದ ಬಗ್ಗೆ ಕೇಳಿದ ಪ್ರಶ್ನೆಗೆ ಶ್ರುತಿ ಖಾರವಾಗಿಯೇ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಶ್ರುತಿ ಅವರ ಬ್ರೇಕಪ್ ಸಂಖ್ಯೆಗಳ ಬಗ್ಗೆ ಪ್ರಶ್ನಿಸಲಾಗಿತ್ತು. ಅದಕ್ಕೆ ಶ್ರುತಿ ಏನು ಉತ್ತರಿಸಿದ್ದಾರೆಂದು ನೋಡಣ ಬನ್ನಿ...
ನಿಮಗೆ ಇದುವರೆಗೂ ಎಷ್ಟು ಬ್ರೇಕಪ್ ಆಗಿದೆ ಎಂದು ಪ್ರಶ್ನೆ ಕೇಳಿದ ನೆಟ್ಟಿಗನಿಗೆ ಮರು ಪ್ರಶ್ನಿಸಿದ ಶ್ರುತಿ, ನೀವು ಎಷ್ಟು ಗರ್ಲ್ಫ್ರೆಂಡ್ ಹೊಂದಿದ್ದೀರಾ? ನನಗನಿಸುತ್ತೆ ನಿಮಗೆ ಶೂನ್ಯ ಅಥವಾ ಅರ್ಧ ಗರ್ಲ್ಫ್ರೆಂಡ್ ಇರಬಹುದು ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಇನ್ನು ಕಳೆದ ತಿಂಗಳು ಮಂದಿರಾ ಬೇಡಿ ಟಾಕ್ ಶೋನಲ್ಲಿ ಶ್ರುತಿ ತಮ್ಮ ಲವ್ ಲೈಫ್ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ಶಂತನು ಜತೆ ತಮ್ಮ ಸಂಬಂಧವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರುತಿ, ನಾನು ಹಿಂದೆ ಸಾಕಷ್ಟು ವಿಷಯಗಳನ್ನು ಮುಚ್ಚಿಟ್ಟಿದ್ದೇನೆ. ಆದರೆ, ನಾನು ತುಂಬಾ ನಿರ್ದಿಷ್ಟವಾಗಿದ್ದೇನೆ. ಬಹಳ ಸಮಯದವರೆಗೆ ನಾನು ಒಂಟಿಯಾಗಿದ್ದೆ. ಏಕೆಂದರೆ ಜನರು ಆ ರೀತಿ ಕಾಣಿಸಿಕೊಳ್ಳಲು ಬಯಸುತ್ತಿದ್ದರು. ಆದರೆ, ಈ ರೀತಿ ಪ್ರೀತಿಯನ್ನು ಮುಚ್ಚಿಡುವುದು ನನ್ನ ಜೀವನ ಪಾಲುದಾರನಿಗೆ ನಾನು ತೋರುತ್ತಿರುವ ಅಗೌರವ ಎಂದು ಭಾವಿಸಿದೆ. ಹಾಗೆಯೇ ನಿಮ್ಮ ಪರಿಸರ ಮತ್ತು ಅದರಲ್ಲಿರುವ ಜನರನ್ನು ಗೌರವಿಸುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಶ್ರುತಿ ಕೊನೆಯದಾಗಿ ವಕೀಲ್ ಸಾಬ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಶ್ರುತಿ ನಾಯಕಿಯಾಗಿದ್ದಾರೆ. ಚಿತ್ರವೂ 2022ರ ಏಪ್ರಿಲ್ನಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್)