ಸಿನಿವಾಣಿ

ನಿಮಗೆ ನಾಚಿಕೆ ಆಗ್ಬೇಕು ಎಂದು ಸೆನ್ಸಾರ್​ ಮಂಡಳಿ ವಿರುದ್ಧ ಗುಡುಗುತ್ತಲೇ ಓಪನ್​ ಆಫರ್​ ಕೊಟ್ಟ ಶಕೀಲಾ!

ಹೈದರಾಬಾದ್​: ಒಂದು ಕಾಲದಲ್ಲಿ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು.

ಇದೀಗ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಶಕೀಲಾ, ಮತ್ತೊಮ್ಮೆ ತನ್ನ ಖ್ಯಾತಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ತಮ್ಮದೆಯಾದ ಒಟಿಟಿ ಫ್ಲಾಟ್​ಫಾರ್ಮ್​ ಆರಂಭಿಸಿರುವ ಶಕೀಲಾ ಎಲ್ಲರಿಗೂ ಓಪನ್​ ಆಫರ್​ ನೀಡಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸ್ತಬ್ಧವಾಗಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಚಿತ್ರಮಂದಿರಗಳ ಗೇಟ್​ ಮುಚ್ಚಿವೆ. ಇದು ಒಟಿಟಿ ಫ್ಲಾಟ್​ಫಾರ್ಮ್​ಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿದೆ. ಅನೇಕರು ಒಟಿಟಿ ಉದ್ಯಮದತ್ತ ಗಮನ ಹರಿಸುತ್ತಿದ್ದಾರೆ. ಅಲ್ಲು ಅರವಿಂದ್​ ಕೂಡ 'ಆಹಾ' ಹೆಸರಿನಲ್ಲಿ ಒಟಿಟಿ ಆರಂಭಿಸಿದ್ದಾರೆ. ನಮಿತಾ, ರಾಮ್ ​ಗೋಪಾಲ್​ ವರ್ಮಾ ಕೂಡ ಅದೇ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಶಕೀಲಾ ಕೂಡ ಅದೇ ಹಾದಿಯಲ್ಲಿ ನಡೆದಿದ್ದಾರೆ.

ಸರಣಿ ಚಿತ್ರಗಳನ್ನು ತಮ್ಮ ಒಟಿಟಿಯಲ್ಲಿ ಬಿಡುಗಡೆ ಮಾಡಲು ಶಕೀಲಾ ಮುಂದಾಗಿದ್ದಾರೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಶಕೀಲಾ ಚಿತ್ರಗಳನ್ನು ಬಿಡುಗಡೆ ಮಾಡಲು ಸೆನ್ಸಾರ್​​ ಮಂಡಳಿ ಅನುಮತಿ ನೀಡಲಿಲ್ಲ. ಅನೇಕ ಬಾರಿ ಪ್ರಯತ್ನ ಮಾಡಿದರೂ ಪ್ರಯೋಜನ ಆಗಲಿಲ್ಲ. ಇದರಿಂದ ಶಕೀಲಾ ಅವರು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಸಹ ಹಾಕಿದ್ದರು. ನಿಮಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಕೀಲಾ, ಇದೀಗ ಚಿತ್ರಮಂದಿರಗಳ ಬದಲಾಗಿ ಡಿಜಿಟಲ್​ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ತನಗಾದ ರೀತಿಯಲ್ಲಿ ಬೇರೆ ಯಾರಿಗೂ ಆಗಬಾರದು ಎಂಬ ಉದ್ದೇಶದಿಂದ ಒಟಿಟಿ ಫ್ಲಾಟ್​ಫಾರ್ಮ್​ ಶುರು ಮಾಡಿದ್ದಾಗಿ ಶಕೀಲಾ ಹೇಳಿಕೊಂಡಿದ್ದಾರೆ. ಇನ್ನು ಮುಂದೆ ನಮಗೆ ಯಾರ ಸಹಾಯವೂ ಬೇಡ. ನಮ್ಮಷ್ಟಕ್ಕೆ ನಾವೇ ಮಾಡಿಕೊಳ್ಳುತ್ತೇವೆ. ಬನ್ನಿ, ಕಿರುಚಿತ್ರಗಳನ್ನು ನಿರ್ಮಾಣ ಮಾಡಿ ನಮ್ಮ ಒಟಿಟಿಯಲ್ಲಿ ಬಿಡುಗಡೆ ಮಾಡಿ ಎಂದು ಶಕೀಲಾ ಮುಕ್ತ ಆಹ್ವಾನ ನೀಡಿದ್ದಾರೆ.

ಶಕೀಲಾ ಅವರ ಮುಂದಿನ ಚಿತ್ರ 'ಅಟ್ಟರ್​ ಪ್ಲಾಪ್​ ಮೂವೀ' ಮತ್ತು 'ರೊಮ್ಯಾನ್ಸ್​' ಬಿಡುಗಡೆಗೆ ಸಿದ್ಧವಾಗಿದೆ. ಒಟಿಟಿ ವೇದಿಕೆಯಲ್ಲಿ ಶಕೀಲಾ ಅವರು ಯಾವ ರೀತಿಯಲ್ಲಿ ಹವಾ ಎಬ್ಬಿಸುತ್ತಾರೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)