ಹೈದರಾಬಾದ್: ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಹಾಗೂ ಟಾಲಿವುಡ್ ಸೂಪರ್ ಸ್ಟಾರ್ಗಳಾದ ಜೂ. ಎನ್ಟಿಆರ್ ಮತ್ತು ರಾಮ್ಚರಣ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ "ಆರ್ಆರ್ಆರ್" ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಇಡೀ ಭಾರತವನ್ನು ಸುತ್ತುತ್ತಿದೆ. ಮಾರ್ಚ್ 25ರ ಶುಕ್ರವಾರದಂದು ವಿಶ್ವದಾದ್ಯಂತ ಆರ್ಆರ್ಆರ್ ತೆರೆಗೆ ಅಪ್ಪಳಿಸಲಿದೆ.
ಚಿತ್ರವನ್ನು ಅದ್ಧುರಿಯಾಗಿ ಬರಮಾಡಿಕೊಳ್ಳಲು ರಾಮ್ಚರಣ್ ಮತ್ತು ಜೂ. ಎನ್ಟಿಆರ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಉಭಯ ನಟರ ಅಭಿಮಾನಿಗಳು ಸಿದ್ಧತೆ ಆರಂಭಿಸಿದ್ದು, ಕಟೌಟ್, ಬ್ಯಾನರ್ಗಳನ್ನು ಅಳವಡಿಸುವ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಆದರೆ, ಅಭಿಮಾನಿಗಳ ನಡುವಿನ ಪೈಪೊಟಿಯಲ್ಲಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ.
ಇತ್ತೀಚೆಗೆ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ರಾಮ್ಚರಣ್ ಮತ್ತು ನೂ. ಎನ್ಟಿಆರ್ ಅಭಿಮಾನಿಗಳ ನಡುವೆ ತೆಲಂಗಾನದ ಕೊಡಾಡ ಪಟ್ಟಣದಲ್ಲಿರುವ ಚಿತ್ರಮಂದಿರದಲ್ಲಿ ಕಿತ್ತಾಟ ನಡೆದಿತ್ತು. ತನ್ನ ಕೌಟೌಟ್ ಅನ್ನು ತೆಗೆದುಬಿಟ್ಟರೆಂದು ಜೂ. ಎನ್ಟಿಆರ್ ಅಭಿಮಾನಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನೆ. ಈ ವೇಳೆ ಸಹ ಅಭಿಮಾನಿಗಳು ಮತ್ತು ಸ್ಥಳೀಯರು ಅವರನ್ನು ತಡೆದು, ಅನಾಹುತ ತಪ್ಪಿಸಿದ್ದಾರೆ.
ಚಿತ್ರಮಂದಿರದಲ್ಲಿ ಘರ್ಷಣೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರು ಥಿಯೇಟರ್‌ಗೆ ಧಾವಿಸಿ ಎರಡು ಗುಂಪುಗಳನ್ನು ಚದುರಿಸಿದರು. ಬಳಿಕ ಘರ್ಷಣೆಗೆ ಕಾರಣರಾದವರನ್ನು ಬಂಧಿಸಿದ್ದಾರೆ. ಅಭಿಮಾನಿಗಳ ಈ ಅತಿರೇಕ ನಟರಿಗು ಮುಜುಗರ ತರಿಸಿದೆ. (ಏಜೆನ್ಸೀಸ್)