ಸಿನಿವಾಣಿ

ರಾಜ್ಯದೆಲ್ಲೆಡೆ ಜೇಮ್ಸ್ ಜಾತ್ರೆ: ಅಪ್ಪು ನೆನೆದು ಅಭಿಮಾನಿಗಳ ಕಣ್ಣೀರು, ನೆಲದ ಮೇಲೆಯೇ ಕುಳಿತು ಸಿನಿಮಾ ವೀಕ್ಷಣೆ

ಬೆಂಗಳೂರು: ಇಂದು (ಮಾರ್ಚ್​ 17) ಅಪ್ಪು ಇಲ್ಲದೆ ಆಚರಿಸುತ್ತಿರುವ ಮೊದಲ ಬರ್ತಡೆ ಎಂಬ ನೋವು ಒಂದು ಕಡೆಯಾದರೆ, ಬರ್ತಡೇ ದಿನವೇ ಬಿಡುಗಡೆಯಾಗಿರುವ ಜೇಮ್ಸ್​ ಚಿತ್ರ ಅಪ್ಪು ಅಭಿನಯದ ಕೊನೆಯ ಚಿತ್ರ ಎಂಬ ನೋವು ಮತ್ತೊಂದು ಕಡೆ. ಅಪ್ಪು ಅಕಾಲಿಕವಾಗಿ ನಮ್ಮನ್ನಗಲಿ ಬಾರದ ಲೋಕಕ್ಕೆ ಪ್ರಯಾಣಿಸಿದರೂ ಅವರ ಆದರ್ಶ ನಮ್ಮ ಜೊತೆಯಲ್ಲೇ ಉಳಿದಿದೆ. ಈ ಸಂದರ್ಭದಲ್ಲಿ ವಾಸ್ತವವನ್ನು ಒಲ್ಲದ ಮನಸ್ಸಿನಿಂದ ಸ್ವೀಕರಿಸಿ, ನೋವನ್ನು ನುಂಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಮತ್ತು ಕೊನೆಯ 'ಜೇಮ್ಸ್​' ಚಿತ್ರವನ್ನು ಅದ್ಧೂರಿಯಾಗಿಯೇ ಆಚರಿಸುವ ಮೂಲಕ ತಮ್ಮ ಪ್ರೀತಿ ಮತ್ತು ಅಭಿಮಾನ ಏನು ಎಂಬುದನ್ನು ಆಕಾಶ ಮುಟ್ಟುವ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

ಹೌದು, ಮಾರ್ಚ್​ 17 ದಿವಂಗತ ನಟ ಪುನೀತ್​ ರಾಜ್​ಕುಮಾರ್ ಅವರ ಹುಟ್ಟಿದ ದಿನ. ಇಂದೇ ಅವರ​ ಅಭಿನಯದ ಕೊನೆಯ ಚಿತ್ರ ಜೇಮ್ಸ್​ ಬಿಡುಗಡೆ ಆಗಿದ್ದು, ರಾಜ್ಯಾದ್ಯಂತ ಅದ್ಧೂರಿ ಓಪನಿಂಗ್​ ಪಡೆದುಕೊಂಡಿದೆ. ರಾಜ್ಯದ ಪ್ರತಿ ಮೂಲೆ ಮೂಲೆಯಲ್ಲೂ ಜೇಮ್ಸ್​ ಜಾತ್ರೆ ನಡೆಯುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಜೇಮ್ಸ್​ ಚಿತ್ರವನ್ನು ಅಪ್ಪು ಅಭಿಮಾನಿಗಳು ಬರ ಮಾಡಿಕೊಂಡಿದ್ದು, ಅಭಿಮಾನದ ಜಯಘೋಷ ಮೊಳಗುತ್ತಿದೆ.

ಇಂದು ರಾಜ್ಯಾದ್ಯಂತ ಜೇಮ್ಸ್​ ಚಿತ್ರ ಮಾತ್ರ ಬಿಡುಗಡೆಯಾಗಿದೆ. ಪುನೀತ್​ಗೆ ಗೌರವ ಸೂಚಕವಾಗಿ ಇಂದು ಬೇರೆ ಯಾವ ಚಿತ್ರವನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ರಾಜ್ಯದೆಲ್ಲೆಡೆ ಜೇಮ್ಸ್​ ಜಾತ್ರೆ, ತಮಟೆ ಸದ್ದು, ನಾದ-ಮೇಳಗಳ ಮಿಶ್ರಣ, ಕಲಾ ತಂಡಗಳ ಸೊಬಗು, ವಿದ್ಯುತ್​ ಅಲಂಕಾರ ಹಾಗೂ ಸಿಡಿಮದ್ದುಗಳೊಂದಿಗೆ ಅದ್ಧೂರಿಯಾಗಿ ನಡೆಯುತ್ತಿದೆ. ಅನೇಕ ಚಿತ್ರಮಂದಿರಗಳು ಮದುವಣಗಿತ್ತಿಯಂತೆ ಅಲಂಕೃತಗೊಂಡಿದೆ. ಪ್ರತಿ ಚಿತ್ರಮಂದಿರದಲ್ಲೂ ಕಟೌಟ್​ಗಳು ರಾರಾಜಿಸುತ್ತಿವೆ. ಯಾವ ಚಿತ್ರಮಂದಿರ ನೋಡಿದರೂ ಅಭಿಮಾನಿಗಳು ಮತ್ತು ಜನರು ಕಿಕ್ಕಿರಿದು ತುಂಬಿದ್ದಾರೆ.

ಬೀದರ್​ನಿಂದ ಹಿಡಿದು ಚಾಮರಾಜನಗರದ ಗಡಿ ಜಿಲ್ಲೆಯವರೆಗೂ ಪ್ರತಿ ಚಿತ್ರಮಂದಿರಗಳಲ್ಲಿ ಜೇಮ್ಸ್​ ಝೇಂಕಾರ ಮೊಳಗಿದೆ. ಒಂದು ಚಿತ್ರ ಬಿಡುಗಡೆಯ ಖುಷಿಯಾದರೆ, ಅಪ್ಪುವನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ತುಂಬಾ ಭಾವುಕರಾಗಿ, ಕಣ್ಣೀರು ಸುರಿಸುತ್ತಿದ್ದಾರೆ.

ನೆಲದ ಮೇಲೆ ಕುಳಿತ ಅಭಿಮಾನಿಗಳು

ರಾಯಚೂರಿನ ನೀಲಕಂಠೇಶ್ವರ ಥಿಯೇಟರ್​ನಲ್ಲಿ ಬೆಳಗ್ಗೆ 5 ಗಂಟೆಗೆ ಶೋ ಆರಂಭವಾಗಿದ್ದು, ಚಿತ್ರಮಂದಿರ ತುಂಬಿ ಆಸನದ ವ್ಯವಸ್ಥೆ ಇಲ್ಲದಿದ್ದರೂ ಅಭಿಮಾನಿಗಳು ನೆಲದ ಮೇಲೆ ಕುಳಿತು ಅಭಿಮಾನಿಗಳು ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ.

ಅಪ್ಪು ಹೆಸರಲ್ಲಿ ಟಿಕೆಟ್​ ಬುಕ್​

ಬೆಳಗಾವಿಯಲ್ಲಿ ರಾಜವಂಶ ಯುವ ಸೇನೆ ಅಪ್ಪು ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದು, ಅಪ್ಪು ಹೆಸರಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಬೆಳಗಾವಿಯ ಚಿತ್ರಾ ಚಿತ್ರಮಂದಿರದ ಮುಂದೆ ರಾತ್ರಿ 12ಕ್ಕೆ ಕೇಕ್ ಕಟ್​ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೆ, ಅಪ್ಪು ಹೆಸರಲ್ಲಿ ಚಿತ್ರಾ ಚಿತ್ರಮಂದಿರದಲ್ಲಿ ಟಿಕೆಟ್ ಬುಕ್ ಮಾಡಿ ಅಭಿಮಾನ ಮೆರೆದಿದ್ದಾರೆ.