ಸಿನಿವಾಣಿ

ನೆಲದ ಮೇಲೆ ಕುಳಿತು ಕುರಿಗಾಯಿಗಳ ಜತೆ ಪುನೀತ್​ ಊಟ​: ರಾಜಕುಮಾರನ ಸರಳತೆಗೆ ಎಲ್ಲರೂ ಫಿದಾ!

ಕೊಪ್ಪಳ: ತಮ್ಮ ಸರಳ ವ್ಯಕ್ತಿತ್ವದಿಂದಲೇ ಅಭಿಮಾನಿಗಳ ಪಾಲಿನ ಆದರ್ಶ ವ್ಯಕ್ತಿಯಾಗಿರುವ ನಟ ಪುನೀತ್​ ರಾಜ್​ಕುಮಾರ್, ಸದಾ ವಿವಾದಗಳಿಂದ ದೂರು ಉಳಿಯುವಂತಹ ವ್ಯಕ್ತಿ. ಈ ಕಾರಣದಿಂದಲೇ ಪುನೀತ್ ನಟನೆಯಿಂದಾಚೆಗೆ​ ಎಲ್ಲರಿಗೂ ಇಷ್ಟವಾಗುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಸರಳತೆಯನ್ನು ಪ್ರದರ್ಶಿಸಿರುವ ಪುನೀತ್​, ಸಾಮಾನ್ಯರಂತೆ ಕುರಿಗಾಯಿಗಳ ಜತೆ ನೆಲದ ಮೇಲೆ ಕುಳಿತು ಊಟ ಮಾಡಿದ್ದಾರೆ. ​

ಡಾಕ್ಯುಮೆಂಟರಿ ಶೂಟಿಂಗ್​ಗಾಗಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್​, ಕರೊನಾ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ ಹಲವು ಊರುಗಳಿಗೆ ಭೇಟಿ ನೀಡಿದರು.

ಈ ವೇಳೆ ನೆಚ್ಚಿನ ನಟನನ್ನು ನೋಡಿದ ಅನೇಕರು ಅವರ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ಥಳೀಯ ಸಂಗೀತ ಕಲಾವಿದರೊಂದಿಗೆ ಸಂಗೀತ ಕಾರ್ಯಕ್ರಮದಲ್ಲಿ ಪುನೀತ್​ ಭಾಗಿಯಾದರು. ಸಮೀಪದ ಪ್ರವಾಸಿ ತಾಣಗಳಿಗೂ ಪುನೀತ್​ ಭೇಟಿ ನೀಡಿ ವೀಕ್ಷಣೆ ಮಾಡಿದರು.

ಪುನೀತ್​ ಅವರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಕುರಿಗಾಯಿಗಳು ನೀಡಿದ ಸಂಗಟಿ‌‌ ಸವಿದು ‌ಸಂಭ್ರಮಿಸಿದರು. ಇದಕ್ಕೆ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪುನೀತ್​ ಸರಳತೆಗೆ ಎಲ್ಲರೂ ಫಿದಾ ಆಗಿದ್ದಾರೆ.