ಸಿನಿವಾಣಿ

ಪುನೀತ್​ ಸಾವಿನ ಸುದ್ದಿ‌ ಕೇಳಿದಾಗಿನಿಂದ ಟಿವಿ ಮುಂದೆ ಕೂತು ಕಣ್ಣೀರಾಕ್ತಿದ್ದ ಅಭಿಮಾನಿ ಹೃದಯಾಘಾತದಿಂದ ಸಾವು

ಬೆಳಗಾವಿ: ನಟ ಪುನೀತ್​ ರಾಜ್​ಕುಮಾರ್​ ನಿಧನ ಸುದ್ದಿ ಕೇಳಿ ಮತ್ತೊಬ್ಬ ಅಭಿಮಾನಿ ಮೃತಪಟ್ಟಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಸಿಂದೋಳ್ಳಿ ಗ್ರಾಮದ ಪರಶುರಾಮ ದೇಮಣ್ಣವರ(33) ಮೃತಪಟ್ಟು ಅಪ್ಪು ಅಭಿಮಾನಿ.

ಟಿವಿ ನೋಡುತ್ತಾ ಕುಳಿತಿದ್ದ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಪುನೀತ್​ ಸಾವಿನ ಸುದ್ದಿ‌ ಕೇಳಿದಾಗಿನಿಂದ ಟಿವಿ ಮುಂದೆ ಕುಳಿತು ದೇಮಣ್ಣವರ ಕಣ್ಣೀರು ಹಾಕುತ್ತಿದ್ದ. ಅಪ್ಪು ಚಿತ್ರ ಬಿಡುಗಡೆಯಾದ್ರೆ ಫಸ್ಟ್ ಡೇ ಫಸ್ಟ್​ ಶೋ ನೋಡುತ್ತಿದ್ದ ಪರಶುರಾಮ್. ತೀವ್ರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಸಾವಿಗೀಡಾಗಿದ್ದಾರೆ.

ನಿನ್ನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದ ಮುನಿಯಪ್ಪ(30) ಎಂಬ ಅಪ್ಪು ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಶುಕ್ರವಾರ ಬೆಳಗ್ಗೆ ಪುನೀತ್​ ರಾಜ್​ಕುಮಾರ್​ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮುನಿಯಪ್ಪ ಆಘಾತಗೊಂಡಿದ್ದರು. ಅಪ್ಪು ಆರೋಗ್ಯ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಮುನಿಯಪ್ಪ ಕಣ್ಣೀರು ಹಾಕುತ್ತಾ ಕುಸಿದರು. ಅತ್ತ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಬರುತ್ತಿದ್ದಂತೆ ಮುನಿಯಪ್ಪಗೆ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣದಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ. 7 ವರ್ಷಗಳಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮುನಿಯಪ್ಪ, ಕರೊನಾ ಹಿನ್ನೆಲೆ ಮರೂರು ಗ್ರಾಮದಲ್ಲಿ ವಾಸವಿದ್ದ. ಪುನೀತ್ ಅವರ ಪ್ರತಿಯೊಂದು ಸಿನಿಮಾವನ್ನು ತಪ್ಪದೇ ನೋಡುತ್ತಿದ್ದ ಮುನಿಯಪ್ಪ, ಆಗಾಗ್ಗೆ ಬೆಂಗಳೂರಿಗೆ ತೆರಳಿ ನೆಚ್ಚಿನ ನಟನನ್ನು ಭೇಟಿಯಾಗುತ್ತಿದ್ದರು. ಮುನಿಯಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ನಿನ್ನೆ ಬೆಳಗ್ಗೆ ಮನೆಯಲ್ಲಿ ಜಿಮ್​ ಮಾಡುವಾಗ ಪುನೀತ್​​ಗೆ ಹೃದಯಾಘಾತ ಆಯಿತು. ತಕ್ಷಣ ಅವರನ್ನು ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಸ್ಥಿತಿ ಗಂಭೀರವಾದ ಬಳಿಕ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಸಂಖ್ಯಾತ ಅಭಿಮಾನಿಗಳ ಕೋರಿಕೆ ಕೊನೆಗೂ ಫಲಿಸಲಿಲ್ಲ. ಆಸ್ಪತ್ರೆಯಲ್ಲಿ ಪುನೀತ್​ ಕೊನೆಯುಸಿರೆಳೆದಿದ್ದಾರೆ. (ದಿಗ್ವಿಜಯ ನ್ಯೂಸ್​)