ನವದೆಹಲಿ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್-2 ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 14ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಇದರ ನಡುವೆ ಕೆಜಿಎಫ್ ಚಿತ್ರತಂಡಕ್ಕೆ ಆತಂಕವೊಂದು ಎದುರಾಗಿದೆ. ಅದಕ್ಕೆ ಕಾರಣ ಬಹುಭಾಷಾ ನಟ ಪ್ರಕಾಶ್ ರಾಜ್. ಅದು ಹೇಗೆ ಪ್ರಕಾಶ್ ರಾಜ್ ಕೆಜಿಎಫ್ಗೆ ಆತಂಕ ಸೃಷ್ಟಿ ಮಾಡಿದರೂ ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ.
ಕೆಜಿಎಫ್ ಮತ್ತು ಪ್ರಕಾಶ್ ರಾಜ್ ನಡುವೆ ಇರುವ ಸಂಬಂಧಕ್ಕೂ ಮುನ್ನ ದಿ ಕಾಶ್ಮೀರ್ ಫೈಲ್ಸ್ ಮತ್ತು ಪ್ರಕಾಶ್ ರಾಜ್ ನಡುವಿನ ಹೊಸ ಸಂಬಂಧದ ಬಗ್ಗೆ ಹೇಳುತ್ತೇವೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರು ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದರು. ಅದೇನೆಂದರೆ, ಕಾಶ್ಮೀರ ಫೈಲ್ಸ್ ಚಿತ್ರವು ಹಳೆಯ ಗಾಯಗಳನ್ನು ವಾಸಿಮಾಡುತ್ತದೆಯೇ? ಅಥವಾ ಇದು ಹೆಚ್ಚು ಪ್ರಚೋದಿಸುತ್ತದೆಯೇ? ಅಥವಾ ದ್ವೇಷದ ಬೀಜಗಳನ್ನು ಬಿತ್ತುವುದೇ? ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ, ಟ್ವೀಟ್ ಜತೆಗೆ ಕಾಶ್ಮೀರ ಫೈಲ್ಸ್ ಚಿತ್ರ ವೀಕ್ಷಣೆ ಬಳಿಕ ಚಿತ್ರಮಂದಿರಲ್ಲಿ ವ್ಯಕ್ತಿಯೊರ್ವ ವೀಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ಇಷ್ಟೇ ಅಲ್ಲದೆ, ಮತ್ತೊಂದು ಟ್ವೀಟ್ನಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರದಂತೆ ಗೋಧ್ರಾ ಫೈಲ್ಸ್, ದೆಹಲಿ ಫೈಲ್ಸ್, ಜಿಎಸ್ಟಿ ಫೈಲ್ಸ್, ಡಿಮಾನೀಟೈಸ್ ಫೈಲ್ಸ್, ಕೋವಿಡ್ ಫೈಲ್ಸ್ ಮತ್ತು ಗಂಗಾ ಫೈಲ್ಸ್ ಚಿತ್ರಗಳನ್ನು ತೆಗೆಯಿರಿ ಎಂದು ಕಿಡಿಕಾರಿದ್ದರು.
ಪ್ರಕಾಶ್ ರಾಜ್ ಮಾಡಿದ ಈ ಎರಡು ಟ್ವೀಟ್ಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು, ಅವರ ವಿರುದ್ಧ ಜಾಲತಾಣದಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದೆ. ಹಿಂದುಗಳ ಭಾವನೆಗಳಿಗೆ ಪ್ರಕಾಶ್ ರಾಜ್ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪವು ಇದೆ. ಅಲ್ಲದೆ, ಪ್ರಕಾಶ್ ರಾಜ್ ವಿರುದ್ಧ ಬಹಿಷ್ಕಾರ ಅಭಿಯಾನವನ್ನು ಆರಂಭಿಸಿದ್ದಾರೆ. ಇದರಿಂದ ಕೆಜಿಎಫ್ ಚಿತ್ರತಂಡಕ್ಕೆ ನಡುಕ ಶುರುವಾಗಿದೆ. ಏಕೆಂದರೆ, ಕೆಜಿಎಫ್ 2ನಲ್ಲಿ ಪ್ರಕಾಶ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಕಾಶ್ ರಾಜ್ ವಿರುದ್ಧ ಬಹಿಷ್ಕಾರ ಹಾಕಿರುವವರು ಕೆಜಿಎಫ್ 2 ಸಿನಿಮಾವನ್ನು ವಿರೋಧಿಸಿದರೆ, ಚಿತ್ರಕ್ಕೆ ಹೊಡೆತ ಬೀಳುವುದು ಗ್ಯಾರೆಂಟಿ ಅಂದುಕೊಂಡಿದ್ದಾರೆ. ಹೀಗಾಗಿ ಚಿತ್ರದ ನಿರ್ಮಾಪಕರಿಗೆ ಹೊಸ ತಲೆನೋವು ಶುರುವಾಗಿದ್ದು, ಸಿನಿಮಾ ಬಿಡುಗಡೆ ಆಗುವವರೆಗಾದರೂ ಪ್ರಕಾಶ್ ರಾಜ್ ಅವರನ್ನು ಸುಮ್ಮನಿರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. (ಏಜೆನ್ಸೀಸ್)