ಬೆಂಗಳೂರು: ಕೆಲ ದಿನಗಳ ಹಿಂದೆ ಕರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಕಿರಾತಕ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರದೀಪ್ ರಾಜ್, ಚಿಕಿತ್ಸೆಗೆ ಸ್ಪಂದಿಸದೇ ಇಂದು (ಜ.20) ಬೆಳಗಿನ ಜಾವ ಮೂರು ಗಂಟೆಗೆ ಪಾಂಡಿಚೇರಿಯ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಪ್ರದೀಪ್ ರಾಜ್ ಅವರಿಗೆ 46 ವರ್ಷ ವಯಸ್ಸಾಗಿತ್ತು. ಕರೊನಾ ಸೋಂಕು ಮಾತ್ರವಲ್ಲದೆ, ಹಲವು ವರ್ಷಗಳಿಂದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಆದರೆ, ಕೆಲವು ತಿಂಗಳ ಹಿಂದೆ ಕೋವಿಡ್ ತಗುಲಿದ್ದರಿಂದ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿತು. ಹೀಗಾಗಿ ಪಾಂಡಿಚೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಪಾಂಡಿಚೇರಿಯಲ್ಲಿ ನಡೆಯಲಿದೆ ಎಂದು ಸೋದರ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರಿಗೆ ವೃತ್ತಿ ಜೀವನದಲ್ಲಿ ಮಹತ್ವದ ತಿರುವು ಕೊಟ್ಟ ಕಿರಾತಕ ಚಿತ್ರವನ್ನು ಪ್ರದೀಪ್ ರಾಜ್ ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಗಣೇಶ್ ಜತೆ ಮಿ. 420, ಬಹುತಾರಾಗಣದ ಬೆಂಗಳೂರು 560023, ದುನಿಯಾ ವಿಜಯ್ ಅಭಿನಯದ ರಜನಿಕಾಂತ, ಸತೀಶ್ ನೀನಾಸಂ ಅಭಿನಯದ ಅಂಜದ ಗಂಡು ಸೇರಿದಂತೆ ಕೆಲ ಚಿತ್ರಗಳನ್ನು ಪ್ರದೀಪ್ ನಿರ್ದೇಶನ ಮಾಡಿದ್ದಾರೆ.
ಪ್ರದೀಪ್ ರಾಜ್ ನಿಧನಕ್ಕೆ ಸ್ನೇಹಿತರು, ಬಂಧು ಬಳಗದವರು ಹಾಗೂ ಇಡೀ ಚಿತ್ರರಂಗ ಕಂಬನಿ ಮಿಡಿದಿದ್ದು, ಸಂತಾಪ ಸೂಚಿಸಿದ್ದಾರೆ.