ಚೆನ್ನೈ: ನಯನತಾರಾ ದೇಶದ ಸಿನಿ ರಂಗದಲ್ಲೇ ಪ್ರಖ್ಯಾತ ನಟಿಯಲ್ಲಿ ಒಬ್ಬರು. ಲೇಡಿ ಸೂಪರ್ ಸ್ಟಾರ್ ಎಂದೇ ಪ್ರಸಿದ್ಧರಾಗಿದ್ದಾರೆ. ದಕ್ಷಿಣ ಭಾರತ ಸಿನಿ ರಂಗದಲ್ಲಿ ಸುಮಾರು 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಹೆಚ್ಚು ಸಭಾವನೆ ನಟಿಯರಲ್ಲಿ ನಯನಾ ಅವರು ಮುಂಚೂಣಿಯಲ್ಲಿದ್ದಾರೆ. ಶಾರುಖ್ ಖಾನ್ ಅಭಿನಯದ ಮತ್ತು ಅಟ್ಲೀ ನಿರ್ದೇಶನದ ಜವಾನ್ ಸಿನಿಮಾ ಮೂಲಕ ಬಾಲಿವುಡ್ಗೂ ಪದಾರ್ಪಣೆ ಮಾಡಿದ್ದಾರೆ.
ಸಿನಿಮಾ ಹೊರತು ಪಡಿಸಿದರೆ, ನಯನಾ ಅವರು ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಾಗಿದ್ದಾರೆ. ಈ ಹಿಂದೆ ನಟರಾದ ಸಿಂಬು ಹಾಗೂ ಪ್ರಭುದೇವ್ ಜತೆಗಿನ ಲವ್ ಅಫೇರ್ಗಳಿಂದಲೂ ನಯನಾ ಸಾಕಷ್ಟು ಚರ್ಚೆಗೆ ಗುರಿಯಾದರು. ಆರಂಭದಲ್ಲಿ ಸಿಂಬು ಜತೆ ನಯನಾ ಡೇಟಿಂಗ್ ಮಾಡುತ್ತಿದ್ದರು. ಇಬ್ಬರು ಮದುವೆ ಮಾಡಿಕೊಳ್ಳುವ ಹಂತಕ್ಕೂ ಹೋಗಿತ್ತು. ಆದರೆ, ಕೆಲವು ಕಾರಣಗಳಿಂದ ಇಬ್ಬರ ಲವ್ ಬ್ರೇಕಪ್ ಆಯಿತು ಎಂದು ಹೇಳಲಾಗಿದೆ. ಒಂದು ಸಮಯದಲ್ಲಿ ಇಬ್ಬರ ಇಂಟಿಮೇಟ್ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ಇದಾದ ಬಳಿಕ ನಯನಾ ಅವರು ಪ್ರಭುದೇವ್ ಅವರ ಜತೆ ಡೇಟಿಂಗ್ ಮಾಡುತ್ತಿದ್ದರು. ಇದು ಕೂಡ ಮದುವೆ ಹಂತಕ್ಕೆ ಹೋಗಿ ಮುರಿದುಬಿದ್ದಿತು. ಕೆಲ ಕಾಲ ಸಿನಿಮಾ ಸಹವಾಸವೇ ಬೇಡ ಎಂದು ದೂರ ಉಳಿದಿದ್ದ ನಯನಾ ಅವರ ಮತ್ತೆ ಕಂಬ್ಯಾಕ್ ಮಾಡಿದ್ದು, ವಿಘ್ನೇಶ್ ಶಿವನ್ ನಿರ್ದೇಶನದ 'ನಾನು ರೌಡಿ ಧಾನ್' ಸಿನಿಮಾ ಮೂಲಕ. ಸಿನಿಮಾ ಮಾಡುತ್ತಲೇ ವಿಘ್ನೇಶ್ ಮತ್ತು ನಯನಾ ನಡುವೆ ಪ್ರೀತಿಯ ಮೊಳಕೆ ಚಿಗುರೊಡೆಯಿತು. ಇತ್ತ ಸಿನಿಮಾ ಕೂಡ ಬಿಗ್ ಹಿಟ್ ಆಯಿತು. ಅಲ್ಲಿಂದಾಚೆಗೆ ನಯನಾ ಅವರ ಅದೃಷ್ಟವೇ ಬದಲಾಯಿತು. ಮುಟ್ಟಿದೆಲ್ಲ ಚಿನ್ನ ಎನ್ನುವಂತೆ ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಿದರು. ಸಾಕಷ್ಟು ಸಿನಿಮಾ ಅವಕಾಶಗಳು ನಯನಾರನ್ನು ಹುಡುಕಿಕೊಂಡು ಬಂದವು.
ಒಂದೆಡೆ ಸಿನಿಮಾಗಳಲ್ಲಿ ಬಿಜಿಯಾದ ನಯನಾ, ಇತ್ತ ವಿಘ್ನೇಶ್ ಪ್ರೀತಿಯಲ್ಲೂ ಮುಳುಗಿದ್ದರು. ಕಳೆದ ಏಳು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಅಂತಿಮವಾಗಿ ಜೂನ್ 9ರಂದು ತಮ್ಮ ಸಂಬಂಧಕ್ಕೆ ಮದುವೆ ಎಂಬ ಅಧಿಕೃತ ಮುದ್ರೆಯನ್ನು ಒತ್ತಿದ್ದಾರೆ. ಇಬ್ಬರು ಮಹಾಬಲಿಪುರಂನ ರೆಸಾರ್ಟ್ ಒಂದರಲ್ಲಿ ಕಲಾವಿದರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಆಗಿದ್ದಾರೆ. ಸಾಕಷ್ಟು ಏಳು-ಬೀಳುಗಳ ನಡುವೆ ಇದೀಗ ವಿಘ್ನೇಶ್ ಬಳಿ ನಿಜವಾದ ಪ್ರೀತಿಯನ್ನು ಕಂಡುಕೊಂಡಿರುವ ನಯನಾತಾರಾ ತುಂಬಾ ಖುಷಿಯಾಗಿದ್ದಾರೆ. ಹೀಗಾಗಿಯೇ ತನ್ನ ಪ್ರೀತಿಯ ಗಂಡನಿಗೆ 20 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದಿಷ್ಟು ಒಂದು ಕತೆಯಾದರೆ, ನಯನತಾರಾ ಮದುವೆಯಾದ ಬೆನ್ನಲ್ಲೇ ವಿಕಿಪೀಡಿಯದ ಮಿಸ್ಟೇಕ್ ಒಂದು ಬಯಲಿಗೆ ಬಂದಿದೆ. ಸದ್ಯ ಆ ಎಡವಟ್ಟು ಅರಿವಾಗಿ ಅದನ್ನು ಸರಿಪಡಿಸಿಯೂ ಆಗಿದೆ. ಏನಪ್ಪಾ ಆ ಮಿಸ್ಟೇಕ್ ಅಂದರೆ, ವಿಕಿಪೀಡಿಯದಲ್ಲಿ ನಯನತಾರಾ ಪ್ರೊಫೈಲ್ನ ಪತಿಯ ಕಾಲಂನಲ್ಲಿ ಸಿಂಬು ಹೆಸರನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ ಅನ್ನು ನಯನಾ ಅಭಿಮಾನಿಗಳು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ವಿಕಿಪೀಡಿಯ ಎಡವಟ್ಟನ್ನು ಸರಿಮಾಡಿಕೊಂಡಿದೆ. ಹೇಳಬೇಕೆಂದರೆ, ನಯನಾ, ಸಿಂಬು ಅವರನ್ನು ಮದುವೆ ಆಗಿಯೇ ಇಲ್ಲ. ಇಬ್ಬರ ನಡುವೆ ಪ್ರೀತಿ ಇದ್ದದ್ದು ನಿಜ ಆದರೆ, ಮದುವೆವರೆಗೂ ಹೋಗಿ ಇಬ್ಬರ ಲವ್ ಬ್ರೇಕಪ್ ಆಗಿತ್ತು. ಆದರೂ, ವಿಕಿಪೀಡಿಯದಲ್ಲಿ ಸಿಂಬು ಹೆಸರು ಬರೆಯುವ ಮೂಲಕ ಎಡವಟ್ಟು ಮಾಡಲಾಗಿತ್ತು. ಇದೀಗ ನಯನಾ ಅವರ ಮದುವೆಯ ಬಳಿಕ ಆ ತಪ್ಪನ್ನು ವಿಕಿಪೀಡಿಯ ಸರಿಪಡಿಸಿದೆ. ಇದರಿಂದ ಕಹಿ ನೆನಪು ಕೂಡ ದೂರವಾದಂತಾಗಿದೆ. (ಏಜೆನ್ಸೀಸ್)