ಸಿನಿವಾಣಿ

ಶ್ರೀಮಂತ ಅಥವಾ ಬಡವ, ಡೇಟಿಂಗ್​ಗೆ ನಿಮ್ಮ ಆಯ್ಕೆ ಯಾರು? ಹರ್ನಾಜ್​ ಉತ್ತರಕ್ಕೆ ಮೆಚ್ಚುಗೆಯ ಮಹಾಪೂರ

ನವದೆಹಲಿ: ಭಾರತದ ಹರ್ನಾಜ್ ಸಂಧು ಡಿ. 13ರಂದು ‘ಮಿಸ್ ಯೂನಿವರ್ಸ್ 2021ರ ಕಿರೀಟವನ್ನು ಅಲಂಕರಿಸಿದ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪಂಜಾಬ್ ಮೂಲದ ಹರ್ನಾಜ್ ಭಾರತವನ್ನು ಪ್ರತಿನಿಧಿಸಿದ್ದರು. 21 ವರ್ಷದ ಚಂಡೀಗಢ ಮೂಲದ ಮಾಡೆಲ್ ಹರ್ನಾಜ್​ ಸಂಧು ಗೆಲುವಿನೊಂದಿಗೆ 21 ವರ್ಷಗಳ ಬಳಿಕ ಭಾರತಕ್ಕೆ ಈ ಕಿರೀಟ ಸಿಕ್ಕಂತಾಗಿದೆ.

2000ನೇ ಸಾಲಿನಲ್ಲಿ ಲಾರಾ ದತ್ತ ಭುವನ ಸುಂದರಿಯಾದ ಬಳಿಕ ಭಾರತದ ಪಾಲಿಗೆ ಈ ಕಿರೀಟ ನನಸಾಗಿಯೇ ಉಳಿದಿತ್ತು. ಲಾರಾ ಅವರಿಗೂ ಮುನ್ನ 1994ರಲ್ಲಿ ಸುಷ್ಮಿತಾ ಸೇನ್‌ ಅವರು ಭುವನ ಸುಂದರಿಯ ಪಟ್ಟ ಏರಿದ್ದರು. ಇದೀಗ ಹರ್ನಾಜ್​ ಸಿಂಧು ಮಿಸ್ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ಈ ಖುಷಿಯ ಕ್ಷಣದ ನಡುವೆ ಹರ್ನಾಜ್​ ಸಂಧು ಅವರು ಇಂಡಿಯಾ ಟುಡೆ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು, ಬಾಲಿವುಡ್​ ಎಂಟ್ರಿ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಈ ಹಿಂದಿನ ಭುವನ ಸುಂದರಿಗಳಾದ ಲಾರ ದತ್ತ ಮತ್ತು ಸುಷ್ಮಿತಾ ಸೇನ್​ ಅವರನ್ನು ಬಾಲಿವುಡ್​ ಸಿನಿಮಾದಲ್ಲಿ ನೋಡಿದ್ದೇವೆ. ಮುಂದೆ ನಿಮ್ಮನ್ನು ಬೆಳ್ಳಿಪರದೇ ಮೇಲೆ ಕಾಣಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ ಹರ್ನಾಜ್​, ಇಷ್ಟು ಬೇಗ ಇದರ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗಷ್ಟೇ ಇದು ಆರಂಭವಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಖಂಡಿತ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಮೊದಲ ಬಾಲಿವುಡ್​ ಚಿತ್ರದಲ್ಲಿ ಯಾವ ಸಹ ಕಲಾವಿದರೊಂದಿಗೆ ತೆರೆಹಂಚಿಕೊಳ್ಳಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಹರ್ನಾಜ್​, ಪ್ರಿಯಾಂಕಾ ಚೋಪ್ರಾ ಮತ್ತು ಲಾರಾ ದತ್ತ ಹಾಗೂ ಸುಷ್ಮಿತಾ ಸೇನ್​ರೊಂದಿಗೆ ಕಾಣಿಸಿಕೊಳ್ಳಲು ಇಚ್ಛಿಸುತ್ತೇನೆ. ಮೂವರನ್ನು ಹಾಕಿಕೊಂಡು ಮಹಿಳಾ ಸಬಲೀಕರಣದ ಬಗ್ಗೆ ಚಲನಚಿತ್ರವನ್ನು ನಿರ್ಮಿಸಿದರೆ ಅದು ಎಷ್ಟು ಪ್ರಬಲವಾಗಿರುತ್ತದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ಅವರೆಲ್ಲರನ್ನೂ ಒಟ್ಟಿಗೆ ನೋಡಿ ಮತ್ತೆ ಇತಿಹಾಸ ಸೃಷ್ಟಿಸುವುದನ್ನು ಕಲ್ಪಿಸಿಕೊಳ್ಳಿ ಎಂದರು.

ಇನ್ನು ಶ್ರೀಮಂತ ಯುವಕ ಅಥವಾ ಜೀವನದಲ್ಲಿ ಬಡತನದ ವಿರುದ್ಧ ಹೋರಾಡುತ್ತಿರುವ ಯುವಕ ಇಬ್ಬರಲ್ಲಿ ಯಾರ ಜತೆ ಡೇಟಿಂಗ್​ ಮಾಡಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಹರ್ನಾಜ್​ ಸಂಧು ಸೊಗಸಾದ ಉತ್ತರ ನೀಡಿದರು. ಜೀವನದ ಹೋರಾಟದಲ್ಲಿರುವ ಯುವಕನೊಂದಿಗೆ ಡೇಟ್ ಮಾಡಲು ನಾನು ಬಯಸುತ್ತೇನೆ. ನಾನು ಕೂಡ ಜೀವನದ ಹಾದಿಯಲ್ಲಿ ಹೋರಾಡಿದ್ದೇನೆ ಮತ್ತು ಹೋರಾಡುತ್ತಲೇ ಇರುತ್ತೇನೆ. ಒಬ್ಬ ವ್ಯಕ್ತಿಯಾಗಿ ಜೀವನದಲ್ಲಿ ಹೋರಾಡುವುದು ತುಂಬಾ ಮುಖ್ಯವೆಂದು ಹೇಳುತ್ತೇನೆ. ಏಕೆಂದರೆ, ಹೋರಾಟದ ಜೀವನದಿಂದ ಮಾತ್ರ ನಮ್ಮ ಸಾಧನೆಗೆ ಒಂದು ಮೌಲ್ಯ ಬರುವುದು ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ ಎಂದು ಹರ್ನಾಜ್​ ಹೇಳಿದ್ದಾರೆ.

ನಿಜ ಹೇಳಬೇಕೆಂದರೆ, ಒಬ್ಬ ವ್ಯಕ್ತಿ ಬಾಲಿವುಡ್‌ಗೆ ಪ್ರವೇಶಿಸಿದಾಗ ಆತ/ಆಕೆ ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಆದರೆ, ನಾನು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನನ್ನ ಮೇಲಿರುತ್ತದೆ. ಹೀಗಾಗಿ ಇಷ್ಟು ಬೇಗ ಈ ಎಲ್ಲದರ ಬಗ್ಗೆ ಮಾತನಾಡುವುದು ಉತ್ತಮವಲ್ಲ. ಇದೀಗ ನನ್ನ ಗೆಲುವನ್ನು ಸಂಭ್ರಮಿಸುವ ಕಡೆ ಗಮನ ಹರಿಸಿದ್ದೇನೆ. ನಾಳೆ ಏನು ನಡೆಯುತ್ತದೆ, ನಾನು ಯಾವ ಯೋಜನೆಗೆ ಸಹಿ ಹಾಕುತ್ತೇನೆ ಎಲ್ಲವನ್ನು ತಿಳಿಸುತ್ತೇನೆಂದು ಹರ್ನಾಜ್​ ಸಂಧು ಮಾತು ಮುಗಿಸಿದರು. (ಏಜೆನ್ಸೀಸ್​)