ಸಿನಿವಾಣಿ

ಹೃದಯಾಘಾತದಿಂದ ಯುವನಟ ಸಾವು: ಬಾತ್​ರೂಮ್​ನಲ್ಲೇ ದುರಂತ ಅಂತ್ಯ ಕಂಡ ಬ್ರಹ್ಮ ಮಿಶ್ರಾ

ನವದೆಹಲಿ: ಮಿರ್ಜಾಪುರ್​ ವೆಬ್​ ಸೀರಿಸ್​ನ ಲಲಿತ್​ ಪಾತ್ರ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಅವರು ಗುರುವಾರ (ಡಿ.2) ಮುಂಬೈನ ಉಪನಗ ವೆರ್ಸೊವಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಿಶ್ರಾ ಅವರು ಮುಂಬೈ ನಿವಾಸದಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮನೆಯ ಬಾತ್​ರೂಮ್​ನಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿದಾಗ ಮನೆಯ ಒಳಗಿಂದ ಬಾಗಿಲು ಲಾಕ್​ ಆಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಿರ್ಜಾಪುರ್​ ವೆಬ್​ ಸೀರಿಸ್​ ಪ್ರಸಾರ ಮಾಡಿದ ಅಮೇಜಾನ್​ ಪ್ರೈಮ್​ ವಿಡಿಯೋ ಟ್ವೀಟ್​ ಮಾಡಿ ಮಿಶ್ರಾ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಬ್ರಹ್ಮ ಮಿಶ್ರಾ, ನಮ್ಮ ಲಲಿತ್​. ನಮ್ಮ ನಗಿಸಿದ್ದಕ್ಕಾಗಿ ಮತ್ತು ಅಳಿಸಿದ್ದಕ್ಕಾಗಿ ಧನ್ಯವಾದಗಳು. ಸ್ನೇಹವು ಹೊಂದಿರುವ ನಿಷ್ಠೆ ಮತ್ತು ಪ್ರೀತಿಯನ್ನು ಯಾವಾಗಲೂ ನಮಗೆ ನೆನಪಿಸುತ್ತಿರುವುದಕ್ಕಾಗಿ ಧನ್ಯವಾದಗಳು. ನೀವು ಯಾವಾಗಲೂ ನಮ್ಮ ಹೃದಯದಲ್ಲಿದ್ದೀರಿ. ನಿಮ್ಮ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಂತಾಪ ಸೂಚಿಸಿದೆ.

ಸಹಕಲಾವಿದರೂ ಕೂಡ ಬ್ರಹ್ಮ ಮಿಶ್ರಾ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ. (ಏಜೆನ್ಸೀಸ್​)