ಸಿನಿವಾಣಿ

ಮಾತಿನ ಮೇಲೆ ಹಿಡಿತವಿಲ್ಲದ ಕಾಲಿವುಡ್​ ನಟಿ ಮೀರಾ ಮಿಥುನ್​ ಯೂಟ್ಯೂಬ್​ ಸಸ್ಪೆಂಡ್​..!

ಚೆನ್ನೈ: ದಲಿತ ಸಮುದಾಯದ ವಿರುದ್ಧ ನಾಲಿಗೆ ಹರಿಬಿಟ್ಟು ಚೆನ್ನೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ವಿವಾದಿತ ನಟಿ ಮೀರಾ ಮಿಥುನ್​ಗೆ ಮತ್ತೊಂದು ಆಘಾತವಾಗಿದೆ. ಆಕೆಯ ಯೂಟ್ಯೂಬ್​ ಚಾನೆಲ್​ ಅನ್ನು ರದ್ದುಗೊಳಿಸಲಾಗಿದೆ.

ಮೀರಾ ಮಿಥುನ್​ ಯೂಟ್ಯೂಬ್​ ವಿಡಿಯೋಗಳು ಹಿಂಸೆಗೆ ಪ್ರಚೋದನೆ ನೀಡುವಂತಿದ್ದು, ಅದನ್ನು ರದ್ದು ಮಾಡುವಂತೆ ಚೆನ್ನೈ ಸಿಸಿಬಿ ಪೊಲೀಸರು ಯೂಟ್ಯೂಬ್​ ಆಡಳಿತ ಮಂಡಳಿಗೆ ಪತ್ರ ಬರೆದಿತ್ತು. ಅದರಂತೆ ಮೀರಾ ಅವರ ಯೂಟ್ಯೂಬ್​ ಚಾನೆಲ್​ ಅನ್ನು ತೆಗೆದು ಹಾಕಲಾಗಿದೆ.

ಮೀರಾ ಮಿಥುನ್​​ ಸಿನಿಮಾಗಳಿಗಿಂತ ವಿವಾದಗಳಿಂದಲೇ ಸದ್ದು ಮಾಡಿದ್ದು ಹೆಚ್ಚು. ಕಾಲಿವುಡ್​ ಖ್ಯಾತ ನಟರಾದ ವಿಜಯ್​ ಮತ್ತು ಸೂರ್ಯ ಸೇರಿದಂತೆ ಅವರ ಪತ್ನಿಯರ ವಿರುದ್ಧವೂ ಮೀರಾ ಅವಹೇಳನಕಾರಿಯಾಗಿ ಮಾತನಾಡಿದ್ದರು. ಮೊನ್ನೆಯಷ್ಟೇ ದಲಿತ ಸಮುದಾಯದ ವಿರುದ್ಧ ಮೀರಾ ನಾಲಿಗೆ ಹರಿಬಿಟ್ಟಿದ್ದಾರೆ.

ದಲಿತ ಸಮುದಾಯದವರು ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿಯೇ ಅವರ ಪರಿಸ್ಥಿತಿ ಹೀಗಿದೆ. ಇಂತವರನ್ನು ಫಿಲ್ಮ್​ ಇಂಡಸ್ಟ್ರಿಯಿಂದಲೇ ಹೊರಗೆ ಹಾಕಬೇಕೆಂದು ಹಿಯಾಳಿಸಿದ್ದರು. ಅದರ ಬೆನ್ನಲ್ಲೇ ಮೀರಾ ವಿರುದ್ಧ ದಲಿತ ಸಂಘಟನೆಗಳಿಂದ ಸಾಕಷ್ಟು ವ್ಯಕ್ತವಾದವು. ಸಾಮಾಜಿಕ ಜಾಲತಾಣದಲ್ಲಿಯು ಟೀಕೆಗಳು ಕೇಳಿಬಂತು ಮತ್ತು ನಟಿಯನ್ನು ಬಂಧಿಸುವಂತೆ ಆಗ್ರಹಿಸಿದರು.

ಮೀರಾ ವಿರುದ್ಧ ದೂರು ಸಹ ದಾಖಲಾಗಿತ್ತು. ಇದರ ನಡುವೆ ಕೇರಳಕ್ಕೆ ಪರಾರಿಯಾಗಿದ್ದ ಮೀರಾಳನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)