ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದಾದ ಬಿಗ್ಬಾಸ್ ಮತ್ತೆ ಕಿರುತೆರೆಗೆ ಅಪ್ಪಳಿಸಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಬಿಗ್ಬಾಸ್ ಸೀಸನ್ 8 ಕಳೆದ ಆಗಸ್ಟ್ನಲ್ಲಿ ಮುಕ್ತಾಯಗೊಂಡಿತ್ತು. ಇದೀಗ ಸೀಸನ್ 9ರ ತಯಾರಿ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ.
ಊಹಪೋಹಗಳ ನಡುವೆ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ ಕಾರ್ಯಕ್ರಮ ಯಾವಾಗ ಪ್ರಾರಂಭವಾಗಲಿದೆ ಎಂಬುದರ ಬಗ್ಗೆ ಸಣ್ಣು ಸುಳಿವು ನೀಡಿದ್ದರು. ಬಹುಶಃ 2022ರ ಜನವರಿಯಲ್ಲಿ 9ನೇ ಸೀಸನ್ ಪ್ರಾರಂಭವಾಗಲಿದೆ ಎಂದಿದ್ದರು. ಆದರೆ, ಕರೊನಾ ಮೂರನೇ ಅಲೆ ಭೀತಿ ಎದುರಾಗಿದ್ದು, ಯಾವುದೇ ಅಡೆತಡೆಯಿಲ್ಲದೇ ಅಂದುಕೊಂಡಂತೆ ಎಲ್ಲವೂ ನಡೆದರೆ ಜನವರಿಯಿಂದಲೇ 9ನೇ ಸೀಸನ್ ಆರಂಭವಾಗಲಿದೆ.
ಈಗಾಗಲೇ ಕಿರುತೆರೆ ಲೋಕದ ಪ್ರಮುಖ ಸೆಲಿಬ್ರಿಟಿಗಳನ್ನು ಕಾರ್ಯಕ್ರಮ ಆಯೋಜಕರು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕಾರ್ಯಕ್ರಮಕ್ಕೂ ಮುನ್ನ ಈ ರೀತಿಯ ಸುದ್ದಿ ಹರಿದಾಡುವುದು ಸಾಮಾನ್ಯವಾಗಿದ್ದು, ಈ ಬಾರಿಯ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಯಾರು ಯಾರು ಇರುತ್ತಾರೆ ಎಂಬ ಕುತೂಹಲಕ್ಕೆ ಶೋ ಶುರುವಾದಗಲೇ ಉತ್ತರ ಸಿಗುತ್ತದೆ.
ಸೀಸನ್ 8 ಬಿಗ್ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲೇ ವಿಭಿನ್ನತೆಗೆ ಸಾಕ್ಷಿಯಾಯಿತು. ಕರೊನಾ ಎರಡನೇ ಅಲೆಯಿಂದ 75 ದಿನಗಳಿಗೆ ಮೊಟಕುಗೊಂಡಿದ್ದ ಶೋ ಮತ್ತೆ ಆರಂಭವಾಗಿ ತನ್ನ ವಿಭಿನ್ನತೆಗೆ ಭರ್ಜರಿ ಟಿಆರ್ಪಿ ಗಳಿಸಿಕೊಂಡಿತ್ತು. ಕಿರುತೆರೆ ಲೋಕದಲ್ಲೇ ದಾಖಲೆ ಟಿಆರ್ಪಿ ದಾಖಲಿಸಿತು. ಈ ಸೀಸನ್ನಲ್ಲಿ ಮಜಾಭಾರತ ಖ್ಯಾತಿಯ ಲ್ಯಾಗ್ ಮಂಜು ಗೆಲುವು ದಾಖಲಿಸಿದರು. ಅರವಿಂದ್ ಕೆ.ಪಿ. ರನ್ನರ್ ಅಪ್ ಆದರು. (ಏಜೆನ್ಸೀಸ್)