ಸಿನಿವಾಣಿ

ವಿಮಾನ ಸಿಬ್ಬಂದಿಯೊಬ್ಬರಿಂದ ಅಸಭ್ಯ ವರ್ತನೆ: ಟ್ವೀಟ್​ ಮೂಲಕ ನೋವು ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ

ಮುಂಬೈ: ಇಂಡಿಗೋ ವಿಮಾನದ ಸಿಬ್ಬಂದಿಯೊಬ್ಬರ ವಿರುದ್ಧ ಸೌತ್​ ಬ್ಯೂಟಿ ಪೂಜಾ ಹೆಗ್ಡೆ ದೂರುಗಳ ಸುರಿಮಳೆಗೈದಿದ್ದಾರೆ. ನನ್ನ ಜತೆ ಹಾಗೂ ನನ್ನ ಸಿಬ್ಬಂದಿಯೊಂದಿಗೆ ಇಂಡಿಗೋ ವಿಮಾನದ ಸಿಬ್ಬಂದಿಯೊಬ್ಬರು ತುಂಬಾ ಕೆಟ್ಟದಾಗಿ ನಡೆದುಕೊಂಡರು ಎಂದು ಟ್ವೀಟ್​ ಮೂಲಕ ಪೂಜಾ ಅಸಮಾಧಾನ ಹೊರಹಾಕಿದ್ದಾರೆ.

ಇಂಡಿಗೋ ವಿಮಾನದ ಸಿಬ್ಬಂದಿ ವಿಪುಲ್​ ನಕಾಶೆ ಎಂಬುವರು ಇಂದು ವಿಮಾನದ ಒಳಗೆ ತುಂಬಾ ಕೆಟ್ಟದಾಗಿ ನಡೆದುಕೊಂಡರು. ಯಾವುದೇ ಕಾರಣವಿಲ್ಲದೆ ನಮ್ಮೊಂದಿಗೆ ಬಹಳ ಸೊಕ್ಕಿನಿಂದ ನಡೆದುಕೊಂಡರು ಮತ್ತು ಅವರ ಜೋರು ಧ್ವನಿ ಬೆದರಿಕೆ ಹಾಕುತ್ತಿರುವಂತಿತ್ತು. ಖಂಡಿತವಾಗಿಯೂ ಆತ ತುಂಬಾ ಅಸಭ್ಯವಾಗಿ ವರ್ತಿಸಿದರು. ಸಾಮಾನ್ಯವಾಗಿ ನಾನು ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ, ಈ ಘಟನೆ ಮಾತ್ರ ಭಯಾನಕವಾಗಿತ್ತು ಮತ್ತು ಮನಸ್ಸಿಗೆ ಘಾಸಿಯಾಯಿತು ಎಂದು ಪೂಜಾ ಟ್ವೀಟ್​ ಮಾಡಿದ್ದಾರೆ.

ಪೂಜಾ ಅವರ ಟ್ವೀಟ್​ಗೆ ನೆಟ್ಟಿಗರು ಕೂಡ ಬೆಂಬಲ ನೀಡಿದ್ದು, ವಿಮಾನ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಯಾಣಿಕರ ಜತೆ ಸೌಜನ್ಯದಿಂದ ಹೇಗೆ ವರ್ತಿಸಬೇಕೆಂಬುದನ್ನು ನಿಮ್ಮ ಸಿಬ್ಬಂದಿಗೆ ತಿಳಿಸಿಕೊಡಿ ಎಂದು ಇಂಡಿಗೋ ವಿಮಾನ ಸಂಸ್ಥೆಗೆ ಸಲಹೆ ನೀಡಿದ್ದಾರೆ.

ಇನ್ನು ಪೂಜಾ ಅವರ ಸಿನಿಮಾ ವಿಚಾರಕ್ಕೆ ಬಂದರೆ, ವಿಜಯ್​ ದೇವರಕೊಂಡ ನಟನೆಯ ಪ್ಯಾನ್​ ಇಂಡಿಯಾ ಸಿನಿಮಾ 'ಜನಗಣಮನ' ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)