ಹೈದರಾಬಾದ್: ಬಹುನಿರೀಕ್ಷಿತ ಲೈಗರ್ ಸಿನಿಮಾ ಬಿಡುಗಡೆಯಾದ ದಿನವೇ ನಟ ವಿಜಯ್ ದೇವರಕೊಂಡ ವಿರುದ್ಧ ಮಾರ್ಮಿಕವಾಗಿ ಟ್ವೀಟ್ ಮಾಡಿದ ಟಾಲಿವುಡ್ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಸೂಯ ಭಾರದ್ವಾಜ್ ವಿರುದ್ಧ ವಿಜಯ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮುಗಿಬಿದ್ದಿದ್ದಾರೆ.
ಲೈಗರ್ ಸಿನಿಮಾ ಮೊನ್ನೆಯಷ್ಟೇ (ಆ.25) ಬಿಡುಗಡೆಯಾಗಿದ್ದು, ಪ್ರೇಕ್ಷಕರ ವಲಯದಲ್ಲಿ ಕಳಪೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಇದರ ನಡುವೆ ವಿಜಯ್ ವಿರುದ್ಧ ಅನುಸೂಯ ಭಾರದ್ವಾಜ್ ಟ್ವೀಟ್ ಒಂದನ್ನು ಮಾಡಿದ್ದರು. ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್, ಮಹಿಳೆಯನ್ನು ನಿಂದಿಸಿದ್ದರ ಕರ್ಮದ ಫಲವೇ ಲೈಗರ್ ಸಿನಿಮಾ ಸೋಲು ಎನ್ನುವ ರೀತಿಯಲ್ಲಿ ಪರೋಕ್ಷವಾಗಿ ವಿಜಯ್ಗೆ ಟಾಂಗ್ ನೀಡಿದ್ದರು.
ಏನಿದು ಅರ್ಜುನ್ ರೆಡ್ಡಿ ವಿವಾದ?
ಐದು ವರ್ಷಗಳ ಹಿಂದೆ ಬಿಡುಗಡೆಯಾದ ವಿಜಯ್ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್ ಕೂಡ ಒಬ್ಬರು. ಅರ್ಜುನ್ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್ ಆ ಡೈಲಾಗ್ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ಅನಸೂಯ ಮತ್ತೊಮ್ಮೆ ವಿಜಯ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ಲೈಗರ್ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್ ಮಾಡುವ ಮೂಲಕ ವಿಜಯ್ಗೆ ತಿರುಗೇಟು ನೀಡಿದ್ದಾರೆ.
ಕರ್ಮ ಬಂದೇ ಬರುತ್ತದೆ
ತಾಯಿಯ ನೋವು ಮಾಯವಾಗುವುದಿಲ್ಲ. ಕರ್ಮವು ಕೆಲವೊಮ್ಮೆ ಬರೋದು ಕಷ್ಟ. ಆದರೆ, ಖಂಡಿತ ಬಂದೇ ಬರುತ್ತದೆ. ಇನ್ನೊಬ್ಬರ ದುಃಖದಲ್ಲಿ ನನಗೆ ಸಂತೋಷವಾಗಿಲ್ಲ ಆದರೆ, ನಂಬಿಕೆ ಮರುಸ್ಥಾಪಿಸಲಾಗಿದೆ ಎಂದು ಅನುಸೂಯ ಟ್ವೀಟ್ ಮಾಡಿದ್ದಾರೆ.
ವಿಜಯ್ ಅಭಿಮಾನಿಗಳಿಂದ ಕಿರುಕುಳ
ಅನಸೂಯ ಟ್ವೀಟ್ ಬೆನ್ನಲ್ಲೇ ವಿಜಯ್ ಅಭಿಮಾನಿಗಳು ಅವರ ಮೇಲೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದಿಸುತ್ತಿದ್ದಾರೆ. ಅನುಸೂಯ ಅವರನ್ನು ಆಂಟಿ ಎಂದು ಕರೆಯುತ್ತಿದ್ದಾರೆ. ಅನುಸೂಯ ಅವರ ಕುಟುಂಬವನ್ನು ಎಳೆತಂದು ಕೆಟ್ಟ ಭಾಷೆಗಳಲ್ಲಿ ನಿಂದನೆ ಮಾಡುತ್ತಿದ್ದಾರೆ. ವಿಜಯ್ ಅಭಿಮಾನಿಗಳು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಫ್ಯಾನ್ಸ್ ಮಾಡಿರುವ ನಿಂದನಾತ್ಮಕ ಟ್ವೀಟ್ಗಳನ್ನು ತಮ್ಮ ಜಾಲತಾಣದಲ್ಲಿ ಅನುಸೂಯ ಶೇರ್ ಮಾಡುತ್ತಿದ್ದಾರೆ. (ಏಜೆನ್ಸೀಸ್)