ಸಿನಿವಾಣಿ

ರಹಸ್ಯವಾಗಿ ಮದ್ವೆಯಾದ ನಯನತಾರಾ-ವಿಘ್ನೇಶ್ ಶಿವನ್​: ದೇವಸ್ಥಾನದಲ್ಲೇ ಹೊರಬಿತ್ತು ಮಹತ್ವದ ಸುಳಿವು!

ಚೆನ್ನೈ: ‘ಲೇಡಿ ಸೂಪರ್​ಸ್ಟಾರ್’ ಬಿರುದಾಂಕಿತ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್​ ಶಿವನ್​ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್​ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕಳೆದ 2 ವರ್ಷಗಳಿಂದ ಬರುತ್ತಲೇ ಇದೆ. ಆದರೆ, ಅದೇಕೋ ಅವರಿಬ್ಬರೂ ಮದುವೆ ಆಗುವ ಘಳಿಗೆ ಇನ್ನೂ ಬಂದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿರುವಾಗಲೇ ಅಭಿಮಾನಿಗಳಿಗೆ ಅಚ್ಚರಿಯ ಸಂಗತಿಯೊಂದು ಇದೀಗ ಎದುರಾಗಿದೆ.

ಕೆಲವೊಂದು ವರದಿಗಳ ಪ್ರಕಾರ ನಯನತಾರಾ ಮತ್ತು ವಿಘ್ನೇಶ್​ ಶಿವನ್​ ಇತ್ತೀಚೆಗಷ್ಟೇ ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ತಾರಾಜೋಡಿ ಇತ್ತೀಚೆಗಷ್ಟೇ ಚೆನ್ನೈನಲ್ಲಿರುವ ಶ್ರೀ ಕಾಳಿಕಾಂಬಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಯನಾತಾರಾ ಹಣೆ ಮತ್ತು ಹಣೆ ಮೇಲ್ಭಾಗದಲ್ಲಿ ಕುಂಕುಮ ಇಟ್ಟುಕೊಂಡು ಜನರ ಎದುರು ಪ್ರತ್ಯಕ್ಷರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಹಿಳೆಯರು ಹಣೆಯ ಮೇಲ್ಭಾಗದಲ್ಲಿ ಕುಂಕುಮ ಇಡುವುದು ಹಿಂದು ಸಂಪ್ರದಾಯದ ಪ್ರಕಾರ ಮದುವೆಯಾಗಿರುವ ಸೂಚಕವಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ನಯನತಾರಾ ಅವರನ್ನು ನೋಡಿದವರು ಖಂಡಿತ ಅವರು ಮದುವೆಯಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ಎಷ್ಟು ಸತ್ಯವೋ ಎಂಬುದನ್ನು ತಾರಾಜೋಡಿಯೇ ಖಚಿತಪಡಿಸಬೇಕಿದೆ.

‘ನಾನುಮ್​ ರೌಡಿ ದಾನ್​’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ವಿಘ್ನೇಶ್​ ಹಾಗೂ ನಯನತಾರಾ ನಡುವೆ ಪ್ರೀತಿ ಟಿಸಿಲೊಡೆದಿದ್ದು, ಅಂದಿನಿಂದ ಇಬ್ಬರೂ ಜತೆಯಾಗಿದ್ದಾರೆ. (ಏಜೆನ್ಸೀಸ್​)