ಸಿನಿವಾಣಿ

ಡಿವೋರ್ಸ್​ಗೆ ಗುಡ್​ಬೈ ಹೇಳಿ ಮತ್ತೆ ಒಂದಾಗಲು ಮುಂದಾದ ಧನುಷ್​-ಐಶ್ವರ್ಯಾ: ಸ್ಟಾರ್​ ದಂಪತಿಯ ಮನವೊಲಿಸಿದ್ದು ಯಾರು?

ಚೆನ್ನೈ: ಕಾಲಿವುಡ್​ನ ಸ್ಟಾರ್​ ದಂಪತಿಗಳೆಂದೇ ಖ್ಯಾತರಾಗಿರುವ ನಟ ಧನುಷ್​ ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನಕ್ಕೆ ಕಳೆದ ಜನವರಿ 17ರಂದು ಏಕಾಏಕಿ ಗುಡ್​ ಬೈ ಹೇಳುವ ಮೂಲಕ ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಶಾಕ್​ ನೀಡಿದ್ದರು. ಇಬ್ಬರು ಡಿವೋರ್ಸ್​ ಘೋಷಣೆ ಮಾಡಿ 9 ತಿಂಗಳಗಳೇ ಕಳೆದಿವೆ. ಇದೀಗ ಬಂದಿರುವ ಖುಷಿಯ ಸಂಗತಿ ಏನೆಂದರೆ, ಸ್ಟಾರ್​ ದಂಪತಿ ಎಲ್ಲವನ್ನು ಮರೆತು ಮತ್ತೆ ಒಂದಾಗಲು ಮುಂದಾಗಿದ್ದಾರಂತೆ. ಹೀಗೊಂದು ಸುದ್ದಿ ಕಾಲಿವುಡ್​ ಗಲ್ಲಿಯಿಂದ ಕೇಳಿಬರುತ್ತಿದೆ.

ಎರಡು ಕುಟುಂಬಗಳು ಮನವೊಲಿಸಿದ ಬಳಿಕ ಧನುಷ್​ ಮತ್ತು ಐಶ್ವರ್ಯಾ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ, ಇಬ್ಬರು ಮತ್ತೆ ಒಂದಾಗುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಡಿವೋರ್ಸ್​ ಘೋಷಣೆ ಮಾಡಿ 9 ತಿಂಗಳೇ ಕಳೆದಿದ್ದರೂ ಈವರೆಗೂ ಯಾರೊಬ್ಬರು ತಮ್ಮ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿಲ್ಲ. ಎರಡು ಕುಟುಂಬಗಳು ಸೇರಿ ಕಳೆದ 9 ತಿಂಗಳಿನಿಂದಲೂ ಸಾಕಷ್ಟು ಬಾರಿ ಇಬ್ಬರ ಮನವೊಲಿಸಿದ್ದು, ಕುಟುಂಬದವರ ಮಾತಿಗೆ ತಮ್ಮ ಡಿವೋರ್ಸ್​ ನಿರ್ಧಾರವನ್ನು ಪಕ್ಕಕ್ಕೆ ಇಡಲು ಮುಂದಾಗಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿದೆ.

ಈ ವರದಿಗಳು ವೈರಲ್ ಆಗುತ್ತಿದ್ದಂತೆ ಜಾಲತಾಣಕ್ಕೆ ಎಂಟ್ರಿ ಕೊಟ್ಟ ಧನುಷ್​ ಅಭಿಮಾನಿಗಳು ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ಧನುಷ್ ಮತ್ತು ಐಶ್ವರ್ಯ ವಿಚ್ಛೇದನಕ್ಕೆ ಬ್ರೇಕ್​ ಹಾಕಲು ಮುಂದಾಗಿರುವ ಸುದ್ದಿ ನಿಜವೆಂದು ಭಾವಿಸುತ್ತೇನೆ. ನಿಜಕ್ಕೂ ಇದು ಒಳ್ಳೆಯ ಸುದ್ದಿಯಾಗಿದೆ. ಆದಷ್ಟು ಬೇಗ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿ ಎಂದು ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.

ಜನವರಿ 17ರಂದು ಟ್ವೀಟ್​ ಮಾಡಿದ್ದ ದಂಪತಿ

ಜ. 17 ರಂದು ಟ್ವೀಟ್​ ಮೂಲಕ ಡಿವೋರ್ಸ್​ ನಿರ್ಧಾರ ತಿಳಿಸಿದ ಧನುಷ್​, ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳು ಒಟ್ಟಿಗೆ ಕಳೆದೆವು. ಈ ಸುದೀರ್ಘ ಪ್ರಯಾಣವು ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿತ್ತು. ಆದರೆ, ಇಂದು ನಾವು ನಮ್ಮ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ ಎಂದು ಧನುಷ್​ ಟ್ವೀಟ್​ ಮಾಡಿದ್ದರು. ಇಷ್ಟೇ ಅಲ್ಲದೆ, ಜನರಲ್ಲಿ ಮನವಿಯೊಂದನ್ನು ಮಾಡಿದ್ದರು. ನಮ್ಮ ನಿರ್ಧಾರವನ್ನು ಗೌರವಿಸಿ, ನಮಗೆ ಬೇಕಾಗಿರುವ ಖಾಸಗಿತನವನ್ನು ನೀಡಿ ಎಂದಿದ್ದರು. ಐಶ್ವರ್ಯಾ ಕೂಡ ಹೇಳಿಕೆಯನ್ನು ನೀಡಿದ್ದು, ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ನಿಮ್ಮ ತಿಳುವಳಿಕೆ ಮತ್ತು ಪ್ರೀತಿ ಮಾತ್ರ ಅಗತ್ಯ ಎಂದು ಜನರಲ್ಲಿ ಕೋರಿದ್ದರು.

ಅಂದಹಾಗೆ ಐಶ್ವರ್ಯಾ ಮತ್ತು ಧನುಷ್​ 2004ರ ನವೆಂಬರ್​ 18ರಂದು ಮದುವೆಯಾದರು. ವಿವಾಹಕ್ಕೂ ಮುನ್ನ ದಂಪತಿ 6 ತಿಂಗಳು ಡೇಟಿಂಗ್​ ನಡೆಸಿದ್ದರು. ದಂಪತಿಗಳಿಗೆ ಯಾತ್ರ ಮತ್ತು ಲಿಂಗ ಹೆಸರಿನ ಇಬ್ಬರು ಗಂಡು ಮಕ್ಕಳಿದ್ದಾರೆ. (ಏಜೆನ್ಸೀಸ್​)