ಸಿನಿವಾಣಿ

ಅಂತಿಮ ಹಂತಕ್ಕೆ ಬಂದ ಕೂಡಲೇ ಬದಲಾಯ್ತ ನಿಮ್ಮ ವರಸೆ?! ಸುದೀಪ್​ ವಿರುದ್ಧ ಅರವಿಯಾ ಅಭಿಮಾನಿಗಳು ಗರಂ

ಬೆಂಗಳೂರು: ಬಿಗ್​ಬಾಸ್ 8ನೇ ಆವೃತ್ತಿಗೆ​ ಇಂದು ರಾತ್ರಿ ಅಂತಿಮವಾಗಿ ತೆರೆ ಬೀಳಲಿದೆ. ಮನೆಯಲ್ಲಿ ಅರವಿಂದ್​, ಮಂಜು ಪಾವಗಡ ಮತ್ತು ದಿವ್ಯಾ ಉರುಡುಗ ಫೈನಲ್​ ಸ್ಪರ್ಧಿಗಳಾಗಿ ಉಳಿದುಕೊಂಡಿದ್ದಾರೆ. ಇಂದು ಮನೆಯಿಂದ ಮತ್ತೊಬ್ಬರು ಎಲಿಮಿನೇಟ್​ ಆಗಲಿದ್ದು, ಕೊನೆಯಲ್ಲಿ ಉಳಿಯುವ ಇಬ್ಬರಲ್ಲಿ ವಿಜೇತ ಯಾರೆಂಬ ಕುತೂಹಲ ಗರಿಗೆದರಿದೆ.

ಶನಿವಾರದಿಂದಲೇ (ಆಗಸ್ಟ್ 7) ಫೈನಲ್​ ಎಪಿಸೋಡ್​ ಆರಂಭವಾಗಿದೆ. ಕಲರ್ಫುಲ್ ಕಾರ್ಯಕ್ರಮಗಳು ಸಹ ವೇದಿಕೆ ಮೇಲೆ ನಡೆದಿದೆ. ನಿನ್ನೆಯೇ ಮೊದಲಿಗೆ ಪ್ರಶಾಂತ್​ ಸಂಬರಗಿ, ನಂತರ ವೈಷ್ಣವಿ ಗೌಡ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ.

ಇನ್ನು ಅರವಿಂದ್​ ಮತ್ತು ದಿವ್ಯಾ ಬಿಗ್​ಬಾಸ್​ ಮನೆಯಲ್ಲಿ ಅರವಿಯಾ ಎಂದೇ ಪ್ರಖ್ಯಾತರಾಗಿದ್ದಾರೆ. ಅದಕ್ಕೆ ಕಾರಣ ಇಬ್ಬರ ನಡುವಿನ ಸಂಬಂಧ. ಪರಸ್ಪರ ಪ್ರೀತಿಸುತ್ತಿದ್ದಾರೆಂದು ಹೇಳಲಾಗಿದೆ. ಇಬ್ಬರ ನಡೆ-ನುಡಿಯೂ ಹಾಗೇ ಇದೆ. ಇದೀಗ ಅರವಿಯಾ ಅಭಿಮಾನಿಗಳು ನಿರೂಪಕ ಸುದೀಪ್​ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಫೈನಲ್​ ಎಪಿಸೋಡ್​ನಲ್ಲಿ ಇಬ್ಬರನ್ನು ಅವಮಾನಿಸಿದ್ದಾರೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಫೈನಲ್​ ಎಪಿಸೋಡ್​ನಲ್ಲಿಯೂ ದಿವ್ಯಾ-ಅರವಿಂದ್​ ಕಾಲೆಳೆಯುವುದನ್ನು ಬಿಡಲಿಲ್ಲ. ಇಲ್ಲಿಯವರೆಗೂ ಟಿಆರ್​ಪಿಗೋಸ್ಕರ ಇಬ್ಬರ ಸಂಬಂಧವನ್ನು ಸಂಭ್ರಮಿಸುತ್ತಿದ್ದರು. ಅಂತಿಮ ಹಂತಕ್ಕೆ ಬಂದ ಬಳಿಕ ಇಬ್ಬರನ್ನು ಟಾರ್ಗೆಟ್​ ಮಾಡಿ ಕಾಲೆಳೆಯುತ್ತಿದ್ದಾರೆ ಎಂದು ಅರವಿಯಾ ಅಭಿಮಾನಿಗಳು ಗರಂ ಆಗಿದ್ದಾರೆ. (ಏಜೆನ್ಸೀಸ್​)