ಸಿನಿವಾಣಿ

ಶಾರುಖ್​ ಪುತ್ರ ಆರ್ಯನ್​ ಖಾನ್​ಗೆ ಬಿಗ್​ ರಿಲೀಫ್​: ಕೊನೆಗೂ ಸಿಕ್ತು ಜಾಮೀನು

ಮುಂಬೈ: ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್​ಸಿಬಿ) ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್​​ಗೆ ಕೊನೆಗೂ ನ್ಯಾಯಾಲಯ ಜಾಮೀನು ನೀಡಿದೆ. ಇಂದು (ಅ.28) ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್​ ಜಾಮೀನು ನೀಡಿದೆ.

ಆರ್ಯನ್​ ಖಾನ್​ ಕಳೆದ ಮೂರು ವಾರಗಳಿಂದ ಜಾಮೀನಿಗಾಗಿ ತುಂಬಾ ಪ್ರಯತ್ನಿಸಿದ್ದರು. ಆದರೆ, ಮುಂಬೈನ ವಿಶೇಷ ಎನ್​ಡಿಪಿಎಸ್​​ ಕೋರ್ಟ್​ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಆರ್ಯನ್ ಖಾನ್​ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆಯ ಬಳಿಕ ಕೊನೆಗೂ ಆರ್ಯನ್​ಗೆ ಜಾಮೀನು ದೊರೆತಿದೆ. ಆರ್ಯನ್​ ಸ್ನೇಹಿತರಾದ ಅರ್ಬಾಜ್​ ಮರ್ಚೆಂಟ್​ ಮತ್ತು ಮಾಡೆಲ್​ ಮನ್​ಮುಮ್​ ಧಮೇಚಾಗೂ ಜಾಮೀನು ಸಿಕ್ಕಿದೆ. 

23 ವರ್ಷದ ಆರ್ಯನ್​ ಖಾನ್​ ಅಕ್ಟೋಬರ್​ 3ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ಅಕ್ಟೋಬರ್​ 8ರಿಂದ ಮುಂಬೈನ ಅರ್ಥರ್​ ರಸ್ತೆಯಲ್ಲಿರುವ ಜೈಲಿನಲ್ಲಿದ್ದರು. ಅಂದಿನಿಂದ ಎರಡು ಬಾರಿ ಆರ್ಯನ್​ಗೆ ಜಾಮೀನು ತಿರಸ್ಕರಿಸಲಾಗಿದೆ. ಕೊನೆಗೂ 25 ದಿನಗಳ ಬಳಿಕ ಆರ್ಯನ್​ಗೆ ಜಾಮೀನು ದೊರೆತಿದೆ.

ಪ್ರತಿ ವಿಚಾರಣೆ ವೇಳೆ ಆರ್ಯನ್​ ಖಾನ್​ ಪರ ವಾದಿಸಿದ ವಕೀಲರು ದಾಳಿಯ ವೇಳೆ ಆರ್ಯನ್​ ಬಳಿ ಯಾವುದೇ ಡ್ರಗ್ಸ್​ ಪತ್ತೆಯಾಗಿಲ್ಲ ಎಂದು ಪದೇಪದೆ ಹೇಳುತ್ತಿದ್ದರು. ಆದರೆ, ರೇವ್​ ಪಾರ್ಟಿಯಲ್ಲಿ ಆರ್ಯನ್​ ಪಾತ್ರವಿದೆ. ಆತ ಅಕ್ರಮ ಡ್ರಗ್ಸ್​ ವ್ಯವಹಾರದಲ್ಲಿ ಭಾಗಿಯಾಗಿದ್ದ ಎಂಬುದನ್ನು ಆತನ ವಾಟ್ಸ್​ಆ್ಯಪ್​ ಚಾಟ್ ಬಹಿರಂಗಪಡಿಸಿದೆ ಎಂದು ಎನ್​ಸಿಬಿ ಪರ ವಕೀಲರು ವಾದಿಸುತ್ತಿದ್ದರು.

ವಾಣಿಜ್ಯ ನಗರಿ ಮುಂಬೈನ ಐಷಾರಾಮಿ ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನ ಒಳಗೆ ನಡೆಯುತ್ತಿದ್ದ ರೇವ್​ ಪಾರ್ಟಿಯ ಮೇಲೆ ಅಕ್ಟೋಬರ್​ 2ರ ರಾತ್ರಿ ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡ ದಾಳಿ ನಡೆಸಿ ಕೊಕೇನ್​, ಹಶೀಶ್​ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಬಾಲಿವುಡ್​ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಸೇರಿದಂತೆ ಒಟ್ಟು 8 ಮಂದಿಯನ್ನು ಎನ್​ಸಿಬಿ ವಶಕ್ಕೆ ಪಡೆದು, ವಿಚಾರಣೆಯ ಬಳಿಕ ಬಂಧಿಸಿತ್ತು.