ಹೈದರಾಬಾದ್: ವಿಜಯ್ ದೇವರಕೊಂಡ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಿನ್ನೆಯಷ್ಟೇ (ಆ.25) ಬಿಡುಗಡೆಯಾಗಿದ್ದು, ಪ್ರೇಕ್ಷಕರ ವಲಯದಲ್ಲಿ ಕಳಪೆ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ವಿಜಯ್ ವಿರುದ್ಧ ಟಾಲಿವುಡ್ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಸೂಯ ಭಾರದ್ವಾಜ್ ಸೇಡು ತೀರಿಸಿಕೊಂಡಿದ್ದಾರೆ.
ಐದು ವರ್ಷಗಳ ಹಿಂದೆ ಬಿಡುಗಡೆಯಾದ ವಿಜಯ್ ನಟನೆಯ ಅರ್ಜುನ್ ರೆಡ್ಡಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್ ಕೂಡ ಒಬ್ಬರು. ಅರ್ಜುನ್ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್ ಆ ಡೈಲಾಗ್ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ಅನಸೂಯ ಮತ್ತೊಮ್ಮೆ ವಿಜಯ್ ವಿರುದ್ಧ ಟ್ವೀಟ್ ಮಾಡಿದ್ದಾರೆ. ಲೈಗರ್ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್ ಮಾಡುವ ಮೂಲಕ ವಿಜಯ್ಗೆ ತಿರುಗೇಟು ನೀಡಿದ್ದಾರೆ.
ತಾಯಿಯ ನೋವು ಮಾಯವಾಗುವುದಿಲ್ಲ. ಕರ್ಮವು ಕೆಲವೊಮ್ಮೆ ಬರೋದು ಕಷ್ಟ. ಆದರೆ, ಖಂಡಿತ ಬಂದೇ ಬರುತ್ತದೆ. ಇನ್ನೊಬ್ಬರ ದುಃಖದಲ್ಲಿ ನನಗೆ ಸಂತೋಷವಾಗಿಲ್ಲ ಆದರೆ, ನಂಬಿಕೆ ಮರುಸ್ಥಾಪಿಸಲಾಗಿದೆ ಎಂದು ಅನುಸೂಯ ಟ್ವೀಟ್ ಮಾಡಿದ್ದಾರೆ.
ಅನಸೂಯ ಟ್ವೀಟ್ ಬೆನ್ನಲ್ಲೇ ವಿಜಯ್ ಅಭಿಮಾನಿಗಳು ಅವರ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಿಂದಿಸುತ್ತಿದ್ದಾರೆ. ಆದರೆ, ಇದಕ್ಕೂ ತಿರುಗೇಟು ನೀಡಿರುವ ಅನಸೂಯ ಎಲ್ಲ ನಿಂದಕರೆ, ನಿಮ್ಮ ಎಲ್ಲ ನಿಂದನೆಗಳನ್ನು ನಿಮ್ಮ ನಿಮ್ಮ ಹೀರೋಗಳ ತಿರುಗಿಸುತ್ತಿದ್ದೇನೆ. ಕರ್ಮ ಖಂಡತ ಬಿಡುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)