ಸಿನಿವಾಣಿ

ಪುಷ್ಪ ಚಿತ್ರದ ವಾಕಿಂಗ್​ ಸ್ಟೈಲ್​ ಹಿಂದಿನ ರಹಸ್ಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟ ಅಲ್ಲು ಅರ್ಜುನ್​!

ಹೈದರಾಬಾದ್​: ಕಳೆದ ಡಿಸೆಂಬರ್​ 17ರಂದು ಪ್ಯಾನ್​ ಇಂಡಿಯಾ ಬಿಡುಗಡೆಯಾದ ಪುಷ್ಪ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತು. ವಿಭಿನ್ನ ಕತೆ ಹಾಗೂ ಹಾಡುಗಳಿಂದಲೇ ಈ ಸಿನಿಮಾ ದೇಶದೆಲ್ಲೆಡೆ ಸದ್ದು ಮಾಡಿತು. ಅದರಲ್ಲೂ ನಟ ಅಲ್ಲು ಅರ್ಜುನ್​ ಅವರ ವಿಶೇಷ ನಟನೆ ಈ ಸಿನಿಮಾದಲ್ಲಿ ಹೆಚ್ಚಿನ ಗಮನ ಸೆಳೆಯಿತು.

ತೆಗ್ಗೋದೇ ಇಲ್ಲ ಮತ್ತು ಪುಷ್ಪ ಅಂದ್ರೆ ಫ್ಲವರ್ ಅಂದುಕೊಂಡ ಫೈಯರ್ರು ಎಂಬಾ ಡೈಲಾಗ್​ಗಳು ಎಲ್ಲರ ಬಾಯಲ್ಲೂ ಕೇಳಿಬರುತ್ತಿದ್ದವು. ಸಿನಿಮಾದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು, ಅಲ್ಲು ಅರ್ಜುನ್​ ವಾಕಿಂಗ್​ ಸ್ಟೈಲ್​ ಮತ್ತು ಮ್ಯಾನರಿಸಂ. ಅನೇಕ ಸೆಲೆಬ್ರಿಟಿಗಳು ಕೂಡ ಅದನ್ನು ನಕಲು ಮಾಡಿದರು. ಈ ಕಾರಣದಿಂದಲೇ ಪುಷ್ಪ ಸಿನಿಮಾ ವಿಶ್ವ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿತು.

ಇತ್ತೀಚೆಗೆ ನಡೆದ ಸಂದರ್ಶನದೊಂದರಲ್ಲಿ ಸಿಗ್ನೇಚರ್​ ವಾಕಿಂಗ್​ ಸ್ಟೈಲ್​ ಹಿಂದಿನ ರಹಸ್ಯವನ್ನು ಅಲ್ಲು ಅರ್ಜುನ್​ ಅವರು ಬಹಿರಂಗಪಡಿಸಿದ್ದಾರೆ. ಇಂಡಿಯಾ ಟುಡೆ ಜತೆ ಮಾತನಾಡಿರುವ ಬನ್ನಿ, ಸಿನಿಮಾದ ಎಲ್ಲ ಕ್ರೆಡಿಟ್​ ಅನ್ನು ನಿರ್ದೇಶಕ ಸುಕುಮಾರ್​ ಅವರಿಗೆ ನೀಡಿದ್ದಾರೆ.

ನೀವು ಏನು ಮಾಡುತ್ತೀರಿ ನನಗೆ ಗೊತ್ತಿಲ್ಲ, ಆದರೆ, ಎಲ್ಲರು ನಿನ್ನಂತೆಯೇ ನಡೆಯಬೇಕು ಎಂದು ಸುಕುಮಾರ್​ ಹೇಳಿದರು. ಇದಾದ ಬಳಿಕ ನಾನು ಒಂದು ಭುಜವನ್ನು ಮೇಲೆತ್ತಿ ನಡೆಯುವ ವಿಭಿನ್ನ ವಾಕಿಂಗ್​ ಸ್ಟೈಲ್​ ಐಡಿಯಾದೊಂದಿಗೆ ವಾಪಸ್​ ಬಂದೆ. ಆ ಸ್ಟೈಲ್​ ಅನ್ನು ಎಲ್ಲರೂ ಸುಲಭವಾಗಿ ನಕಲು ಮಾಡಬಹುದು ಎಂದು ಭಾವಿಸಿದೆ. ಕೊನೆಗೆ ಅದು ಯಶಸ್ವಿಯೂ ಆಯಿತು ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

ಇನ್ನು ಈ ಬ್ಲಾಕ್‌ಬಸ್ಟರ್ ಚಿತ್ರವು ವಿಶ್ವಾದ್ಯಂತ ಸುಮಾರು 365 ಕೋಟಿ ರೂ. ಗಳಿಸಿತು. ಹಿಂದಿ ಆವೃತ್ತಿಯೂ ಸಹ ಬಾಕ್ಸ್ ಆಫೀಸ್‌ನಲ್ಲಿ ಸರಿಸುಮಾರು 110 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು. ಇದೇ ಸಂದರ್ಭದಲ್ಲಿ ಚಿತ್ರದ ಪ್ಯಾನ್ ಇಂಡಿಯಾ ಯಶಸ್ಸಿನ ಬಗ್ಗೆ ಮಾತನಾಡಿದ ಅಲ್ಲು ಸರ್ಜುನ್​, ಪ್ಯಾನ್​ ಇಂಡಿಯಾ ಐಡಿಯಾ ಇಡೀ ದೇಶವನ್ನು ಮೆಚ್ಚಿಸಲು ಅಲ್ಲ, ಆದರೆ ಇದು ಉತ್ತಮ ವಸ್ತು (ಸಿನಿಮಾ)ವಾಗಿತ್ತು. ಸ್ಥಳೀಯ ಪ್ರೇಕ್ಷಕರು ಸಹ ಈ ಸಿನಿಮಾದಿಂದ ಪ್ರಭಾವಿತರಾದರು. ಎಲ್ಲಡೆ ಮೆಚ್ಚುಗೆ ಗಳಿಸಿತು ಎಂದಿದ್ದಾರೆ.

ಇದೀಗ ಇಡೀ ಚಿತ್ರತಂಡ ಪುಷ್ಪ: ದಿ ರೂಲ್ ಎಂಬ ಶೀರ್ಷಿಕೆಯ ಮುಂದಿನ ಭಾಗದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಈ ವರ್ಷದ ಅಂತ್ಯದಲ್ಲೇ ಈ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)