ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ‘ಪುಟ್ಟಕ್ಕನ ಮಕ್ಕಳು’ ಒಂದು. ಇದೊಂದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡ ಮಹಿಳೆಯ ಕಥೆ. ಛಲಗಾತಿ ಪುಟ್ಟಕ್ಕನ ಈ ಸಾಹಸ ಕಥೆಯು ಕನ್ನಡಿಗರ ಮನಗೆದ್ದಿದ್ದು, ಇದೀಗ 1000 ಕಂತುಗಳನ್ನು ಪೂರೈಸಿದೆ. ಜಿ.ಎಸ್.ಪ್ರೊಡಕ್ಷನ್ ನಿರ್ಮಾಣದಲ್ಲಿ 2021ರ ಡಿಸೆಂಬರ್ 13ರಂದು ಆರಂಭವಾದ ಈ ಧಾರಾವಾಹಿಯು ಶೀರ್ಷಿಕೆ ಗೀತೆಯಿಂದಲೇ ಎಲ್ಲರ ಗಮನಸೆಳೆದಿತ್ತು. ಪ್ರಸಾರವಾದ ಮೊದಲ ವಾರವೇ 13.5 ಟಿವಿಆರ್ ಗಳಿಸಿ, ಇಡೀ ದೇಶದಲ್ಲೇ ಅತಿಹೆಚ್ಚು ಓಪನಿಂಗ್ ಪಡೆದ ಧಾರಾವಾಹಿ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಇದೀಗ 1000 ಕಂತುಗಳನ್ನು ಪೂರೈಸಿದ್ದು, ಮತ್ತೊಂದು ದಾಖಲೆ ನಿರ್ಮಿಸಿದೆ. ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಾರಿಕಾ, ಗುರು ಹೆಗ್ಡೆ, ಧನುಷ್, ಅಕ್ಷರ, ವಿದ್ಯಾ, ಶಿಲ್ಪಾ, ಅನಿರೀಶ್ ಕಲಾ ಬಳಗದಲ್ಲಿದ್ದಾರೆ. ಅಲ್ಲದೇ, ಇತ್ತೀಚೆಗೆ ಮಹಿಳೆಯೊಬ್ಬರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನೋಡಿ, ಸ್ಫೂರ್ತಿಗೊಂಡು ತಾವೂ ಸಹ ಹೊಟೇಲ್ ಉದ್ಯಮ ಶುರು ಮಾಡಿದ್ದಾರೆ ಎಂಬ ವಿಚಾರಕ್ಕೂ ಗಮನಾರ್ಹವಾದುದು. ‘ಒಂದು ಕಥೆಯನ್ನು ಬರಹಗಾರ ಎಷ್ಟೇ ಚಂದ ಬರೆದರೂ, ನಿರ್ದೇಶಕ ಅಚ್ಚುಕಟ್ಟಾಗಿ ಚಿತ್ರಿಸಿದರೂ, ನಟರು ಪ್ರಬುದ್ಧ್ದತೆಯಿಂದ ನಟಿಸಿದರೂ, ಅದಕ್ಕೊಂದು ವಾಹಿನಿ ದೊರೆತಾಗಲೇ ಜನರನ್ನು ಮುಟ್ಟುತ್ತದೆ. ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಈ ಕಥೆ ಮೇಲಿಟ್ಟಂತಹ ನಂಬಿಕೆ ಮತ್ತು ವಾಹಿನಿಯ ಇಡೀ ತಂಡದ ನೆರವು, ಇಂದು ಪುಟ್ಟಕ್ಕನನ್ನು ಸಾವಿರದ ಪುಟ್ಟಕ್ಕಳನ್ನಾಗಿ ರೂಪಿಸಿದೆ’ ಎಂದು ತಂಡ ಖುಷಿ ಹಂಚಿಕೊಂಡಿದೆ. ಸತ್ಯಕಿ ಚಿತ್ರಕಥೆ, ಸಂಭಾಷಣೆ, ಅರೂರ್ ಜಗದೀಶ್ ಪ್ರಧಾನ ನಿರ್ದೇಶನ, ಮಹೇಶ್ ಸಾರಂಗ್ ಸಂಚಿಕೆ ನಿರ್ದೇಶನ, ಮುರುಳಿ ಸಹ ನಿರ್ದೇಶನ, ಜಯಚಂದ್ರ ಸಂಕಲನ ಈ ಧಾರಾವಾಹಿಗಿದೆ.