ಸಿನಿವಾಣಿ

ಪುಷ್ಕರ್ ಸಿಕ್ಸರ್: ಈ ವರ್ಷ ಆರು ಚಿತ್ರಗಳ ಬಿಡುಗಡೆ

kumarvrl

ಬೆಂಗಳೂರು:  ‘ಅವನೇ ಶ್ರೀಮನ್ನಾರಾಯಣ’ ನಂತರ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಐದು ಚಿತ್ರಗಳ ನಿರ್ಮಾಣದಲ್ಲಿ  ತೊಡಗಿಸಿಕೊಂಡಿರುವ ಅವರು, ಜೂನ್​ನಲ್ಲಿ ರಕ್ಷಿತ್ ಅಭಿನಯದ ಹೊಸ ಚಿತ್ರವೊಂದನ್ನು ಪ್ರಾರಂಭಿಸಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಪುಷ್ಕರ್ ನಿರ್ವಣದ ಆರು ಚಿತ್ರಗಳು ಇದೊಂದೇ ವರ್ಷ ಬಿಡುಗಡೆಯಾಗಲಿವೆ.

ಹೌದು, ಈ ವರ್ಷ ಆರು ಚಿತ್ರಗಳು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಸ್ವತಃ ಪುಷ್ಕರ್ ಸ್ಪಷ್ಟಪಡಿಸಿದ್ದಾರೆ. ಮೊದಲ ಹಂತವಾಗಿ ಜೂನ್​ನಲ್ಲಿ ‘ಭೀಮಸೇನ ನಳಮಹರಾಜ’ ಮತ್ತು ವಿನಯ್ ರಾಜಕುಮಾರ್ ಅಭಿನಯದ ‘ಟೆನ್’ ಚಿತ್ರಗಳು ಬಿಡುಗಡೆಯಾಗಲಿವೆ. ಅದಲ್ಲದೆ, ಸೆನ್ನಾ ಹೆಗ್ಡೆ ನಿರ್ದೇಶನದಲ್ಲಿ ಪುಷ್ಕರ್ ನಿರ್ವಿುಸುತ್ತಿರುವ ‘ತಿಂಗಳಾಳ್ಚ ನಿಶ್ಚಯಂ’ ಎಂಬ ಮಲಯಾಳಂ ಸಿನಿಮಾ ಸಹ ಬಿಡುಗಡೆಯಾಗಲಿದೆ. ಇನ್ನು ಜುಲೈನಲ್ಲಿ ಶರಣ್ ಅಭಿನಯದ ‘ಅವತಾರ್ ಪುರುಷ’, ಅಕ್ಟೋಬರ್​ನಲ್ಲಿ ‘777 ಚಾರ್ಲಿ’ ತೆರೆ ಕಾಣಲಿವೆ. ವರ್ಷದ ಕೊನೆಗೆ ರಕ್ಷಿತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಸಹ ರಿಲೀಸ್ ಆಗಲಿದೆ. ಒಂದೇ ವರ್ಷದಲ್ಲಿ ಒಂದೇ ನಿರ್ಮಾಣ ಸಂಸ್ಥೆಯಿಂದ ಇಷ್ಟೊಂದು ಸಂಖ್ಯೆಯ ಚಿತ್ರಗಳು ನಿರ್ವಣವಾದ ಉದಾಹರಣೆ ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಆಗಿಲ್ಲ ಎಂಬುದು ಗಮನಾರ್ಹ. ಈ ಪೈಕಿ ‘777 ಚಾರ್ಲಿ’ ಚಿತ್ರವು ಕನ್ನಡವಲ್ಲದೆ, ಇನ್ನೂ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಹಾಕಿದ ದುಡ್ಡಿಗೆ ಮೋಸವಿಲ್ಲ: ಇನ್ನು ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಕುರಿತಾಗಿ ಕೇಳಿದರೆ, ‘ಹಾಕಿದ ದುಡ್ಡಿಗೆ ಮೋಸವಾಗಲಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. ‘ನಾವು ಹಾಕಿದ ಇನ್ವೆಸ್ಟ್​ಮೆಂಟ್ ಬಂದಿದೆ. ಆದರೆ, ತುಂಬ ದುಡ್ಡು ಖರ್ಚು ಮಾಡಿದ್ದರಿಂದ ಹೆಚ್ಚು ಲಾಭ ಆಗಲಿಲ್ಲ. ಲಾಭ-ನಷ್ಟ ಎನ್ನುವುದಕ್ಕಿಂತ ಹೆಚ್ಚಾಗಿ ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ಇದೆ. ನಮ್ಮ ಮಟ್ಟಿಗೆ ಅದೊಂದು ದೊಡ್ಡ ಸಾಧನೆ ಮತ್ತು ಮೈಲಿಗಲ್ಲು’ ಎನ್ನುತ್ತಾರೆ ಪುಷ್ಕರ್.

ಅಮೆಜಾನ್​ನಲ್ಲಿ ಹಿಟ್: ಬೇರೆ ಭಾಷೆಗಳಲ್ಲಿ ‘ಅವನೇ ಶ್ರೀಮನ್ನಾರಾಯಣ’ನ ಸಾಧನೆ ಬಗ್ಗೆ ಕೇಳಿದರೆ, ‘ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ಒಳ್ಳೆಯ ಪ್ರದರ್ಶನ ಕಂಡಿತು. ತಮಿಳು ಮತ್ತು ಮಲಯಾಳಂನಲ್ಲಿ ಆವರೇಜ್ ಎನ್ನುವ ರೀತಿ ಇತ್ತು. ತಾಂತ್ರಿಕ ಕಾರಣಗಳಿಂದ ಹಿಂದಿಯಲ್ಲಿ ಬಿಡುಗಡೆ ಮಾಡಲಿಲ್ಲ. ಅಷ್ಟರಲ್ಲಿ ಅಮೆಜಾನ್​ನಲ್ಲಿ ಬಿಡುಗಡೆಯಾಗಿತ್ತು. ಅಮೆಜಾನ್​ನಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಕನ್ನಡ ಚಿತ್ರಗಳಲ್ಲಿ ನಮ್ಮದೂ ಒಂದು. ಅಲ್ಲಿಂದ ತುಂಬ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಅದರಿಂದ ಕನ್ನಡ ಚಿತ್ರಗಳನ್ನು ಬೇರೆ ಭಾಷೆಯ ಜನರು ಸಹ ನೋಡುವಂತೆ ಆಯಿತು. ಅದರ ಬಗ್ಗೆ ಜನರಲ್ಲಿ ಅರಿವು ಮೂಡಿತು’ ಎನ್ನುತ್ತಾರೆ ಅವರು.