ಬೆಂಗಳೂರು: ಶಿವರಾತ್ರಿಗೆ ಬಿಡುಗಡೆ ಆಗಲಿರುವ ಡಾಲಿ ಧನಂಜಯ ಮತ್ತು ದುನಿಯಾ ಸೂರಿ ಕಾಂಬಿನೇಷನ್ನ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಎಲ್ಲ ಕಡೆಯೂ ಸದ್ದು ಮಾಡುತ್ತಿದ್ದು, ಕಾರಿನ ಧೂಳಿನ ಮೇಲೆಯೂ ಸಿನಿಮಾದ ಪೋಸ್ಟರ್ ರಚಿಸಲಾಗಿದೆ.
ನಟ ಧನಂಜಯ ಅವರ ಸ್ನೇಹಿತ ಬಾದಲ್ ನಂಜುಂಡಸ್ವಾಮಿ ರಸ್ತೆಗಳಲ್ಲಿ ಗುಂಡಿ ಬಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರೆ, ಅಲ್ಲೊಂದು ಚಿತ್ರ ಬಿಡಿಸಿ ಜಾಗೃತಿ ಮೂಡಿಸುತ್ತಿದ್ದರು. ಈಗ ಗೆಳೆಯನ ಚಿತ್ರಕ್ಕೆ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದು, ಕಾರ್ ಮೇಲಿನ ಧೂಳಿನಲ್ಲಿ ಧನಂಜಯ ಚಿತ್ರ ಬಿಡಿಸಿ ತಮ್ಮ ಕಲಾ ಚತುರತೆ ತೋರಿದ್ದಾರೆ. ನುಣ್ಣಗೆ ಬೋಳಿಸಲಾಗಿರುವ ಧನಂಜಯ ತಲೆ ಮೇಲೆ ಮಂಕಿ ಎಂದು ಬರೆದಿರುವ ಈ ಚಿತ್ರದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದೇ ಚಿತ್ರವನ್ನು ಕಲಾವಿದ ಬಾದಲ್ ಕಾರಿನ ಧೂಳಿನಲ್ಲಿ ಬಿಡಿಸಿದ್ದಾರೆ.
ವಿವಿಧ ಊರುಗಳ ಒಂದಷ್ಟು ಕಲಾವಿದರು ಸಿನಿಮಾದಲ್ಲಿರುವ ಧನಂಜಯ ಅವರ ವಿಭಿನ್ನ ಗೆಟಪ್ಗಳನ್ನು ಸ್ಕೆಚ್ ಮಾಡಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಅಭಿಮಾನಿಯೊಬ್ಬ ತಲೆ ಬೋಳಿಸಿಕೊಂಡು ಅದರ ಮೇಲೆ ರಿಲೀಸ್ ದಿನಾಂಕ ಬರೆದುಕೊಂಡಿರುವ ಫೋಟೋ ಕೂಡ ಆನ್ಲೈನ್ನಲ್ಲಿ ಸದ್ದು ಮಾಡುತ್ತಿದೆ. ಫೆ. 21ಕ್ಕೆ ಸಿನಿಮಾ ಬಿಡುಗಡೆ ಆಗಲಿರುವುದರಿಂದ ಧನಂಜಯ ತಮ್ಮ ಟ್ವಿಟರ್ ಅಕೌಂಟ್ ಹೆಸರನ್ನು ‘ಮಂಕಿ ಸೀನ’ ಎಂದು ಬದಲಿಸಿಕೊಂಡಿದ್ದಾರೆ.
‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಏಕಕಾಲದಲ್ಲಿ ಆಸ್ಟ್ರೇಲಿಯಾ, ಅಮೆರಿಕದಲ್ಲಿ ರಿಲೀಸ್ ಆಗಲಿದೆ. ಹಂಚಿಕೆ ಪುಷ್ಕರ್ ತೆಕ್ಕೆಗೆ: ಈ ಚಿತ್ರದ ವಿತರಣಾ ಹಕ್ಕನ್ನು ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತೆಗೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿತರಣಾ ಸಂಸ್ಥೆ ಆರಂಭಿಸಿರುವ ಪುಷ್ಕರ್, ಮೋಹನ್ ಫಿಲಮ್್ಸ ಜತೆ ಸೇರಿಕೊಂಡು ‘ಪಾಪ್ಕಾರ್ನ್..’ ವಿತರಿಸುತ್ತಿದ್ದಾರೆ.