ಸಿನಿವಾಣಿ

JAMES TEASER: ರಿಲೀಸ್ ಆದ 3 ಗಂಟೆಗೆ ಎಷ್ಟು ಮಿಲಿಯನ್ ವೀಕ್ಷಣೆ ಪಡೆದಿದೆ ಗೊತ್ತಾ?

ಅಪ್ಪು ಅವರ ‘ಜೇಮ್ಸ್’ ಚಿತ್ರವನ್ನು ವೀಕ್ಷಿಸಲು ಸಿನಿ ಪ್ರೇಮಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಅಂತವರ ಖುಷಿಗೆ ಇಂದು ರಿಲೀಸ್ ಆದ 1.27 ನಿಮಿಷದ ‘ಜೇಮ್ಸ್’ ಟೀಸರ್​ನಲ್ಲಿ ಅಪ್ಪು ಪಾತ್ರದ ಒಂದು ಸಣ್ಣ ಪರಿಚಯವಿದ್ದು, ಅದನ್ನು ಕಂಡ ಅಭಿಮಾನಿಗಳ ಫಿದಾ ಆಗಿದ್ದಾರೆ. ಒಂದು ಪಕ್ಕಾ ಆಕ್ಷನ್ ಪ್ಯಾಕ್ ಸಿನಿಮಾ ‘ಜೇಮ್ಸ್’ ಎನ್ನುವದಕ್ಕೆ ಇಂದು ಬಿಡುಗಡೆಯಾದ ಟೀಸರ್ ಸಾಕ್ಷಿ ಎಂದರೇ ತಪ್ಪಾಗುವುದಿಲ್ಲ. ಅಪ್ಪು ಅವರ ಪಾತ್ರಕ್ಕೆ ನಟ ಶಿವರಾಜ್ ಕುಮಾರ್ ಅವರು ಡಬ್ಬಿಂಗ್ ಮಾಡಿದ್ದಾರೆ.
ಪುನೀತ್​ ರಾಜ್​ಕುಮಾರ್ ಅವರು ಹೃದಯಾಘಾತದಿಂದ ಕಳೆದ ವರ್ಷ ಅ.29ರಂದು​ ನಿಧನರಾಗಿದ್ದು ಎಲ್ಲರಿಗೂ ತೀವ್ರ ನೋವುಂಟುಮಾಡಿತ್ತು. ಹೀಗಾಗಿ, ಅಪ್ಪು ಕೊನೆಯ ಬಾರಿಗೆ ತೆರೆ ಮೇಲೆ ಮಿಂಚಲಿರುವ ಈ ಸಿನಿಮಾವನ್ನು ಅಭಿಮಾನಿಗಳು ತುಂಬು ಹೃದಯದಿಂದ ಆಧರಿಸುತ್ತಾ, ಖುಷಿ ಪಡುತ್ತಿದ್ದಾರೆ. ಬೆಂಗಳೂರಿನ ಹಲವು ಕಡೆ LED ಸ್ಕ್ರೀನ್​ಗಳನ್ನು ಹಾಕಿ, ಸಿನಿಮಾದ ಟೀಸರ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಂಡರು. ಟೀಸರ್​ನ ಹಲವು ದೃಶ್ಯಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಮತ್ತೊಂದೆಡೆ, ಬಿಡುಗಡೆಯಾದ ಕೇವಲ 1 ಗಂಟೆಯಲ್ಲಿ ‘ಜೇಮ್ಸ್’ ಚಿತ್ರದ ಟೀಸರ್ 1 ಮಿಲಿಯನ್ ವೀಕ್ಷಣೆ ಗಿಟ್ಟಿಸಿಕೊಂಡಿದೆ. ಜತೆಗೆ, ಕೇವಲ 60 ನಿಮಿಷಗಳಲ್ಲಿ 180 ಲಕ್ಷ ಲೈಕ್ಸ್ ಪಡೆದಿತ್ತು. ಬಳಿಕ, ಮೂರು ಗಂಟೆ ಒಳಗೆ 1.5 ಮಿಲಿಯನ್ ವೀಕ್ಷಣೆ, 400k ಲೈಕ್ಸ್, 40,000ಕ್ಕೂ ಹೆಚ್ಚು ಕಾಮೆಂಟ್ಸ್ ಗಿಟ್ಟಿಸಿಕೊಂಡಿದೆ. ಇನ್ನು, ಸದ್ಯ ಟೀಸರ್ ರಿಲೀಸ್ ಆಗಿ 5 ಗಂಟೆಯಾಗಿದ್ದು 3.3 ಮಿಲಿಯನ್ ವೀಕ್ಷಣೆಗಳು ಪಡೆದಿದೆ.
ಟೀಸರ್ ರಿಲೀಸ್ ಆದ 60 ನಿಮಿಷದಲ್ಲಿ ಟ್ರೆಂಡಿಂಗ್ ಲಿಸ್ಟ್ ನಲ್ಲಿ ಕೂಡಾ ಸಿನಿಮಾಗೆ ಸ್ಥಾನ ದೊರಕಿದೆ. ಸಿನಿಮಾದ ಟೀಸರ್ ಒಂದು ಒಂದು ನಿಮಿಷಕ್ಕೂ ಸಾವಿರ ಸಾವಿರ ವೀಕ್ಷಣೆಗಳನ್ನು ಪಡೆಯುತ್ತಿದೆ ಎನ್ನಲಾಗಿದೆ. ಇದು, ಹೀಗೆ ಮುಂದುವರಿದರೆ, ‘ಜೇಮ್ಸ್’ ಟೀಸರ್ ಹಳೆಯ ಎಲ್ಲಾ ದಾಖಲೆಗಳನ್ನು ಅಳಿಸಿ, ಹೊಸ ದಾಖಲೆಗಳನ್ನು ಬರೆಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.