ಬೆಂಗಳೂರು: ‘ಲವ್ ಮಾಕ್ಟೇಲ್’ ಬಳಿಕ ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ಒಟ್ಟಿಗೆ ನಟಿಸಿರುವ ಚಿತ್ರ ‘ಓ’. ವಿಶೇಷ ಅಂದರೆ ಈ ಚಿತ್ರದಲ್ಲಿ ಇಬ್ಬರೂ ಅಕ್ಕ-ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾರರ್ ಲವ್ಸ್ಟೋರಿ ಚಿತ್ರವಾಗಿದ್ದು ಮಹೇಶ್ ಸಿ. ಅಮ್ಮಲ್ಲಿದೊಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಹಾಡೊಂದಕ್ಕೆ ಪುನೀತ್ ರಾಜಕುಮಾರ್ ಕಂಠದಾನ ಮಾಡಿದ್ದು, ಆ ಹಾಡನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿತು. ನಿರ್ದೇಶಕ ಚೇತನ್ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಹಾಡು ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಮಹೇಶ್, ‘ಇದು ಹಾರರ್ ಛಾಯೆಯ ಚಿತ್ರವಾದರೂ ಹೊಸತನದ ನಿರೂಪಣೆಯಿದೆ. ಈ ಹಾಡನ್ನು ಅಪು್ಪ ಅವರಿಂದಲೇ ಹಾಡಿಸಬೇಕೆಂದು, ಅವರನ್ನು ಭೇಟಿಯಾಗಿ ಹಾಡಿನ ವಿಶೇಷತೆಯನ್ನು ಹೇಳಿದೆವು. ಆಗ ಅವರು ಖಂಡಿತ ಹಾಡುತ್ತೇನೆ, ಹಾಡಿನ ಬಿಡುಗಡೆ ಸಮಯದಲ್ಲಿ ತಿಳಿಸಿ ಬರುತ್ತೇನೆ ಎಂದು ಹೇಳಿದ್ದರು’ ಎಂದು ಪುನೀತ್ ರಾಜಕುಮಾರ್ ಚಿತ್ರತಂಡಕ್ಕೆ ನೀಡಿದ ಬೆಂಬಲವನ್ನು ಸ್ಮರಿಸಿಕೊಂಡರು.
ಕಿರಣ್ ತಲಕಾರು ಚಿತ್ರಕ್ಕೆ ಕಥೆ ಬರೆದು, ಏಕಾಕ್ಷರ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ವಿುಸಿದ್ದಾರೆ. ಅವರು ಚಿತ್ರದ ಬಗ್ಗೆ ಮಾತನಾಡುತ್ತಾ, ಚಿತ್ರದಿಂದ ಬರುವ ಲಾಭದಲ್ಲಿ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ಯೋಜನೆಯ ಬಗ್ಗೆ ಹೇಳಿಕೊಂಡರು.
ಬಳಿಕ ಮಾತನಾಡಿದ ಅಮೃತಾ ಅಯ್ಯಂಗಾರ್, ‘ನಾನು ಚಿಕ್ಕ ವಯಸ್ಸಿನಿಂದಲೂ ಪುನೀತ್ ಅವರ ಅಭಿಮಾನಿ. ಅವರನ್ನು ನಾವೆಲ್ಲ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಈ ಚಿತ್ರದಲ್ಲಿ ಹಾರರ್ ಎಫೆಕ್ಟ್ ಚೆನ್ನಾಗಿ ಮೂಡಿಬಂದಿದೆ. ನಾನು ಎಲ್ಲ ರೀತಿಯ ಎಮೋಷನ್ಸ್ ಇರುವ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ನಂತರ ಮಾತಿಗಿಳಿದ ನಾಯಕ ಸಿದ್ದು ಮೂಲಿಮನಿ, ‘ನನ್ನ ಅಮ್ಮ ಅಪು್ಪ ದೊಡ್ಡ ಅಭಿಮಾನಿ. ಇಂದು ಸಹ ಅವರು ಬಂದಿದ್ದಾರೆ’ ಎಂದರು. ಚಿತ್ರಕ್ಕೆ ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಕಿರಣ್ ರವೀಂದ್ರನಾಥ್ ಸಂಗೀತ, ಸತೀಶ್ ಬಾಬು ಹಿನ್ನೆಲೆ ಸಂಗೀತ, ಶ್ರೀಕಾಂತ್ ಸಂಕಲನವಿದೆ.