ಸಿನಿವಾಣಿ

ದಾನಿಶ್ ಆರ್ಟ್ಸು ಸಂಯುಕ್ತಾ ಸೈನ್ಸು; ಪುನೀತ್ ನಿರ್ಮಾಣದ ಚಿತ್ರ ಪ್ರಾರಂಭ

Webdesk - Ravikanth

ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಪಿಆರ್​ಕೆ ಬ್ಯಾನರ್​ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಸಿನಿಮಾ ಖ್ಯಾತಿಯ ದಾನಿಶ್ ಸೇಠ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ‘ಒನ್ ಕಟ್ ಟು ಕಟ್’ ಎಂದು ಶೀರ್ಷಿಕೆಯೂ ಅಂತಿಮವಾಗಿದೆ. ಇದೀಗ ಈ ಸಿನಿಮಾಕ್ಕೆ ನಾಯಕಿಯಾಗಿ ಸಂಯುಕ್ತಾ ಹೊರನಾಡು ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ವಂಶಿಧರ್ ಭೋಗರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಶಾಲೆಯೊಂದರ ಕ್ರಾಫ್ಟ್ ಶಿಕ್ಷಕನಾಗಿ ದಾನಿಶ್ ಕಾಣಿಸಿಕೊಂಡರೆ, ವಿಜ್ಞಾನದ ಶಿಕ್ಷಕಿಯಾಗಿ ಸಂಯುಕ್ತಾ ಅವರ ಪಾತ್ರ ಸಾಗಲಿದೆ. ಈಗಾಗಲೇ ನಾಲ್ಕು ದಿನದ ಶೂಟಿಂಗ್ ಮುಕ್ತಾಯವಾಗಿದ್ದು, ಪಿಆರ್​ಕೆ ಬ್ಯಾನರ್​ನಲ್ಲಿ ಸಿನಿಮಾ ಸಿಕ್ಕಿದ್ದಕ್ಕೆ ಸಂಭ್ರಮದಲ್ಲಿದ್ದಾರೆ ಸಂಯುಕ್ತಾ. ಈ ಬಗ್ಗೆ ಮಾತನಾಡುವ ಸಂಯುಕ್ತಾ, ‘ಯುವ ನಿರ್ದೇಶಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ತಮ್ಮ ಪಿಆರ್​ಕೆ ಬ್ಯಾನರ್​ನಲ್ಲಿ ಪುನೀತ್ ಅವರು ಅವಕಾಶ ನೀಡುತ್ತ ಬಂದಿದ್ದಾರೆ. ಅದಷ್ಟೇ ಅಲ್ಲ ಪ್ರಯೋಗಾತ್ಮಕ ಸಿನಿಮಾಗಳೂ ಅವರ ಪ್ರೊಡಕ್ಷನ್​ನಿಂದ ಬಂದಿವೆ. ‘ಒನ್ ಕಟ್ ಟು ಕಟ್’ ಸಹ ಅದೇ ರೀತಿಯ ಒಂದು ಮಜವಾದ ಹಾಸ್ಯ ಶೈಲಿಯ ಸಿನಿಮಾ’ ಎಂದು ಹೇಳಿಕೊಳ್ಳುತ್ತಾರೆ. ಇನ್ನು ಪ್ರಕಾಶ್ ಬೆಳವಾಡಿ, ಸಂಪತ್, ರೂಪಾ ರಾಯಪ್ಪ, ವಿನೀತ್ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.