ಶಿವಮೊಗ್ಗ: ಸಕ್ರೆಬೈಲು ಬಿಡಾರದ ಮರಿ ಆನೆಯೊಂದಕ್ಕೆ ಪುನೀತ್ ಎಂದು ನಾಮಕರಣ ಮಾಡುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಪುನೀತ್ ರಾಜಕುಮಾರ್ಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.
ಬುಧವಾರ ನೇತ್ರಾ ಎಂಬ ಆನೆಯ ಗಂಡು ಮರಿಗೆ ಪುನೀತ್ ಹೆಸರನ್ನು ನಾಮಕರಣ ಮಾಡಲಾಗಿದೆ. ಸಕ್ರೆಬೈಲು ಆನೆ ಬಿಡಾರದ ಪ್ರತಿ ಆನೆಗೂ ಒಂದೊಂದು ಹೆಸರಿದೆ. ಆನೆಗೆ ಎರಡು ವರ್ಷವಾದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು, ಬಿಡಾರದ ಸಿಬ್ಬಂದಿ ಸೇರಿಕೊಂಡು ನಾಮಕರಣ ಶಾಸ್ತ್ರ ಮುಗಿಸುತ್ತಾರೆ. ದೇವರ ಹೆಸರು, ಪುರಾಣಗಳಲ್ಲಿ ಬರುವ ವಿಶಿಷ್ಟ ಹೆಸರನ್ನು ಆನೆಗಳಿಗೆ ಇಡಲಾಗುತ್ತದೆ. ಇದೇ ಮೊದಲ ಬಾರಿಗೆ ಚಿತ್ರನಟನ ಹೆಸರು ನಾಮಕರಣ ಮಾಡಿರುವುದು ವಿಶೇಷ.
ಪುನೀತ್ ಮುದ್ದಾಡಿದ್ದ ಮರಿ: ಎರಡು ತಿಂಗಳ ಹಿಂದೆ ಸಕ್ರೆಬೈಲು ಆನೆ ಬಿಡಾರಕ್ಕೆ ವನ್ಯಜೀವಿಗಳ ಸಂರಕ್ಷಣೆಗೆ ಸಂಬಂಧಿಸಿದ ಸಾಕ್ಷ್ಯತ್ರವೊಂದರ ಚಿತ್ರೀಕರಣಕ್ಕೆ ಬಂದಿದ್ದ ನಟ ಪುನೀತ್ ರಾಜಕುಮಾರ್ ತಾಯಿ ನೇತ್ರಾಳೊಂದಿಗೆ ಇದ್ದ ಆನೆ ಮರಿಯ ಮೈ ಸವರಿ ಮುದ್ದಾಡಿದ್ದರು. ಈಗ ಪುನೀತ್ ಇಹಲೋಕ ತ್ಯಜಿಸಿದ್ದಾರೆ.
ಆದರೆ ಸಕ್ರೆಬೈಲಿಗೆ ಅವರ ಕೊನೆಯ ಭೇಟಿಯ ನೆನಪನ್ನು ಹಸಿರಾಗಿಡುವ ನಿಟ್ಟಿನಲ್ಲಿ ಹಾಗೂ ಅವರು ಮುದ್ದಾಡಿದ್ದ ಆನೆ ಮರಿಯನ್ನು ಗುರುತಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್, ವೈದ್ಯ ಡಾ. ವಿನಯ್, ಬಿಡಾರದ ಮಾವುತರು, ಕಾವಾಡಿಗರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.