ಸಿನಿವಾಣಿ

ಸ್ನೇಹಜೀವಿ ‘ಅಪ್ಪು’: ‘ಅಣ್ಣಾಬಾಂಡ್’ ಪುನೀತ್ ರಾಜಕುಮಾರ್ ಒಡನಾಟ ನೆನೆದ ನಟಿ ನಿಧಿ ಸುಬ್ಬಯ್ಯ

ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷ. ಭೌತಿಕವಾಗಿ ಅಪ್ಪು ನಮ್ಮೊಂದಿಗೆ ಇಲ್ಲವಾದರೂ, ಸಿನಿಮಾ ಹಾಗೂ ಸ್ಫೂರ್ತಿಯುತ ಜೀವನದ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಅಪ್ಪು ಸ್ನೇಹಜೀವಿ. ಖ್ಯಾತ ನಟ ಎಂಬ ಯಾವ ಹಮ್ಮುಬಿಮ್ಮು ಇಲ್ಲದೆ ಸಹ ಕಲಾವಿದರ ಜತೆಗೆ ತುಂಬಾ ಪ್ರೀತಿಯಿಂದ ಇರುತ್ತಿದ್ದರು. ಪ್ರತಿಯೊಬ್ಬರನ್ನು ಗೌರವದಿಂದ ಕಂಡು ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು. ಇಂತಹ ಸ್ನೇಹಜೀವಿ ಪುನೀತ್ ಜತೆಗಿನ ಒಡನಾಟದ ಬಗ್ಗೆ ‘ಅಣ್ಣಾಬಾಂಡ್’ ನಟಿ ನಿಧಿ ಸುಬ್ಬಯ್ಯ ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.

ಅಣ್ಣಾಬಾಂಡ್’ ಸಿನಿಮಾದ ಮೂಲಕ ಪುನೀತ್ ರಾಜಕುಮಾರ್ ಜತೆ ಕೆಲಸ ಮಾಡಲು ಅವಕಾಶ ದೊರೆತಿದ್ದು, ನನ್ನ ಜೀವನದ ಅದ್ಭುತ ಕ್ಷಣವದು. ಚಿತ್ರರಂಗಕ್ಕೆ ಕಾಲಿಟ್ಟು ಮೂರು ವರ್ಷಗಳಷ್ಟೇ ಆಗಿತ್ತು. ಅಷ್ಟು ಬೇಗ ನನಗೆ ಅಂತಹ ದೊಡ್ಡ ನಟರ ಜತೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ‘ಅಣ್ಣಾಬಾಂಡ್’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರನ್ನು ಮೊದಲಿಗೆ ಭೇಟಿ ಮಾಡಿದ್ದು. ಒಂದು ಕಡೆ ಪುನೀತ್ ಸರ್, ಇನ್ನೊಂದ ಕಡೆ ಪ್ರಿಯಾಮಣಿ. ಇಬ್ಬರ ನಡುವೆ ನಾನು. ಅದೇ ವೇಳೆ ‘ಪುನೀತ್ ಸರ್’ ಎಂದು ಕರೆದೆ. ಆಗ ಅವರು ‘ಸರ್ ಎನ್ನಬೇಡಿ, ಪುನೀತ್ ಅನ್ನಿ ಸಾಕು’ ಎಂದು ಸಲುಗೆಯಿಂದ ಹೇಳಿದರು. ಅಷ್ಟು ನಮ್ನನ್ನು ಸ್ನೇಹದಿಂದ ಕಾಣುತ್ತಿದ್ದರು. ಇನ್ನು ಶೂಟಿಂಗ್ ಆರಂಭವಾದ ಎರಡು-ಮೂರು ದಿನ ಆದ ಮೇಲೆ ನನ್ನದೊಂದು ಉದ್ದವಾದ ಡೈಲಾಗ್ ಇತ್ತು. ಅದು ಹೇಳುವಾಗ ತುಂಬಾ ತಪ್ಪುತ್ತಿದ್ದೆ. ತಾಳ್ಮೆಯಿಂದ ಅದನ್ನು ಹೇಳಿಕೊಟ್ಟಿದ್ದರು. ಆ ನೆನಪಗಳು ಇಂದಿಗೂ ಮಾಸುವುದಿಲ್ಲ. ಇಡೀ ಒಂದು ವರ್ಷ ಅವರ ಜತೆ ಖುಷಿಯಿಂದಲೇ ಕಳೆದಿದ್ದೆವು.

ತೂಕ ಇಳಿಸಿಕೊಳ್ಳಲು ಅವರೇ ಸ್ಫೂರ್ತಿ

ನಾನೆದರೂ ದೇಹದ ತೂಕ ಕಡಿಮೆ ಮಾಡಿಕೊಂಡು ಚೆನ್ನಾಗಿ ಕಾಣುತ್ತಿದ್ದೇನೆ ಎಂದರೆ, ಅದಕ್ಕೆ ಅಪ್ಪು ಸರ್ ಸ್ಫೂರ್ತಿ. ಕೆಲ ಸಮಯಗಳ ಹಿಂದೆ ದೇಹದ ತೂಕ ಹೆಚ್ಚಾಗಿಬಿಟ್ಟಿತ್ತು. ‘ನೀವು ಸ್ಫೋರ್ಟ್ಸ್‌ಪರ್ಸನ್ ಆಗಿ ಕೂಡ ತೂಕ ಹೆಚ್ಚಿಸಿಕೊಂಡರೆ ಹೇಗೆ ನಿಧಿ’ ಎಂದು ಒಂದಿಷ್ಟು ಟಿಪ್ಸ್ ನೀಡಿದರು. ಅವರನ್ನ ಸ್ಫೂರ್ತಿ ಪಡೆದೇ ನಾನು ಜಿಮ್‌ಗೆ ಸೇರಿಕೊಂಡೆ, ಸೈಕ್ಲಿಂಗ್ ಆರಂಭಿಸಿದೆ. ಕಯಾಕಿಂಗ್ ಮಾಡಿದೆ. ಕ್ರಮೇಣ ದೇಹದ ತೂಕ ಕಡಿಮೆಯಾಯಿತು. ಇನ್ನು ‘ಅಣ್ಣಾಬಾಂಡ್’ ಶೂಟಿಂಗ್ ವೇಳೆ ಅದ್ಭುತವಾದ ಸಲಹೆ ನೀಡಿದ್ದರು. ಸಿನಿಮಾದ ಜತೆ ಜತೆಗೆ ಯಾವುದಾದರೂ, ಬಿಜಿನೆಸ್ ಆರಂಭಿಸಿ, ಆದಾಯಕ್ಕೆ ಇದನ್ನಷ್ಟೇ ನಂಬಿ ಕೂರಬೇಡಿ, ಬೇರೆ ಏನಾದರೂ ಪ್ಲ್ಯಾನ್ ಮಾಡಿ ಎಂದಿದ್ದರು. ಈ ಮುಂದಾಲೋಚನೆ ಮಾತುಗಳು ಈಗ ನಿಜ ಅನಿಸುತ್ತದೆ. ಅವರ ಜತೆ ನಟಿಸುವ ಪ್ರತಿ ಕಲಾವಿದರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಬದುಕುವ ದಾರಿ ತೋರಿಸುತ್ತಿದ್ದರು.

ಶಿಸ್ತಿನ ಸಿಪಾಯಿ

ಮುತ್ತತ್ತಿ ಅರಣ್ಯ ವಲಯದಲ್ಲಿ ‘ಅಣ್ಣಾಬಾಂಡ್’ಶೂಟಿಂಗ್ ನಡೆಯುತ್ತಿತ್ತು. ಬೆಳಗ್ಗೆ 7 ಗಂಟೆಗೆ ಶೂಟ್ ಇದೆ ಅಂದರೆ, 6 ಗಂಟೆಗೆಲ್ಲಾ ಅಪ್ಪು ಸರ್ ಬಂದಿರುತ್ತಿದ್ದರು. ಅದರ ಹಿಂದಿನ ದಿನ ತುಂಬಾ ಆ್ಯಕ್ಷನ್ ದೃಶ್ಯಗಳ ಶೂಟಿಂಗ್ ಮಾಡಿರುತ್ತಿದ್ದರು. ಆ ಉರಿ ಬಿಸಿಲಿನಲ್ಲಿ ಎಲ್ಲರೂ ಸುಸ್ತಾದರೆ, ಅಪ್ಪು ಸರ್‌ಲ್ಲಿ ಮಾತ್ರ ಬಳಲಿಕೆ ಕಾಣುತ್ತಿರಲಿಲ್ಲ. ಅಷ್ಟು ಎನರ್ಜಿಟಿಕ್ ಆಗಿರುತ್ತಿದ್ದರು. ಮರುದಿನ ಶೂಟಿಂಗ್‌ಗೆ ಬೇಗ ಬರುತ್ತಿದ್ದರು. ಸಮಯಕ್ಕೆ ಆದ್ಯತೆ ನೀಡುತ್ತಿದ್ದರು. ಶೂಟಿಂಗ್ ಸಮಯದ ಅಷ್ಟು ದಿನ ಸೈಕ್ಲಿಂಗ್, ಕಯಾಕಿಂಗ್‌ನ್ನು ತಪ್ಪಿಸಿಕೊಂಡವರಲ್ಲ.

ಕೂರ್ಗ್ ಫುಡ್ ಇಷ್ಟಪಟ್ಟಿದ್ದರು

ಅಪ್ಪು ಸರ್ ಊಟ ಮಾಡುವುದು ಅವರಲ್ಲಿ ನನಗೆ ಇಷ್ಟವಾದ ಗುಣ. ಎಲ್ಲೇ ಇರಲಿ, ಅಲ್ಲಿನ ಖಾದ್ಯವನ್ನು ಸವಿಯುತ್ತಿದ್ದರು. ಮೈಸೂರಿನಲ್ಲಿ 20 ದಿನ ಶೂಟಿಂಗ್ ಇರುವಾಗ ಅಮ್ಮನಿಂದ ಕೂರ್ಗ್ ಶೈಲಿಯ ಚಿಕನ್, ಮಟನ್ ಖಾದ್ಯವನ್ನು ಮಾಡಿಕೊಂಡು ತಿನ್ನುತ್ತಿದ್ದರು. ಕೂರ್ಗ್ ಶೈಲಿಯ ಊಟವನ್ನು ತುಂಬಾ ಇಷ್ಟಪಟ್ಟಿದ್ದರು. ಇನ್ನು ಸ್ಪೇನ್‌ಗೆ ಹೋದಾಗ ಕೂಡ ಅಲ್ಲಿನ ಆಹಾರವನ್ನೇ ಸವಿದಿದ್ದರು. ಟ್ರಾವೆಲ್ ಮಾಡುವಾಗ ಹಳೆಯ ಆಸ್ಕರ್ ಪ್ರಶಸ್ತಿ ಗೆದ್ದ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರು. ಹಾಗೆಯೇ ಒಳ್ಳೆಯ ಸಿನಿಮಾಗಳನ್ನು ರೆಕಮೆಂಡ್ ಮಾಡುತ್ತಿದ್ದರು. ಅವರೊಬ್ಬ ಎಮೋಷನಲ್ ಇಂಟಲಿಜೆಂಟ್ ಪರ್ಸನ್. ಅವತ್ತಿಗೂ ಹೇಳಿದ್ದೆ ಇಂದಿಗೂ ಹೇಳುವೆ. ಪುನೀತ್ ಸರ್ ಹಾಗೂ ದಿಗಂತ್ ಎಂದಿಗೂ ನನ್ನ ಫೇವರೆಟ್.

ಇಂದು ಪುನೀತ್ ನಾಲ್ಕನೇ ಪುಣ್ಯಸ್ಮರಣೆ

ನಟ ಪುನೀತ್ ರಾಜಕುಮಾರ್ ಅವರ 4ನೇ ಪುಣ್ಯತಿಥಿ ಇಂದು. ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ದೊಡ್ಮನೆ ಕುಟುಂಬದಿಂದ ಬೆಳಗ್ಗೆ ಪೂಜೆ ನಡೆಯಲಿದೆ. ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ಸಹೋದರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿ ಇಡೀ ಕುಟುಂಬದವರು ಪೂಜೆಯಲ್ಲಿ ಪಾಲ್ಗೊಳ್ಳುವರು. ಅಭಿಮಾನಿಗಳಿಂದ ಅನ್ನದಾನ, ರಕ್ತದಾನ ಸೇರಿ ವಿವಿಧ ಸಾಮಾಜಿಕ ಸೇವೆ ಕಾರ್ಯಗಳು ನಡೆಯಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದತ್ತ ಧಾವಿಸಿ, ನೆಚ್ಚಿನ ನಟನ ದರ್ಶನ ಪಡೆಯಲಿದ್ದಾರೆ.