ಸಿನಿವಾಣಿ

ಚಿತ್ರೀಕರಣವೂ ಮುಗೀತು; ಇದೀಗ ಟೀಸರ್​ ಸಹ ಬಿಡುಗಡೆಯಾಯ್ತು ...

ಬೆಂಗಳೂರು:ಲಾಕ್​ಡೌನ್​ ಮುಗಿದ ನಂತರ ಪ್ರಾರಂಭವಾದ ಚಿತ್ರಗಳ ಪೈಕಿ ಶಾನ್ವಿ ಶ್ರೀವಾತ್ಸವ್​ ಅಭಿನಯದ 'ಕಸ್ತೂರಿ ಮಹಲ್​' ಚಿತ್ರ ಸಹ ಒಂದು. ಕನ್ನಡದಲ್ಲಿ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ದಿನೇಶ್ ಬಾಬು ಅವರ ನಿರ್ದೇಶನದ 50ನೇ ಚಿತ್ರವಾದ 'ಕಸ್ತೂರಿ ಮಹಲ್'ನ ಚಿತ್ರೀಕರಣ ಮುಗಿದಿರುವುದಷ್ಟೇ ಅಲ್ಲ, ಇತ್ತೀಚೆಗೆ ಟೀಸರ್​ ಸಹ ಬಿಡುಗಡೆಯಾಗಿದೆ.

ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದವರು 'ಪವರ್ ಸ್ಟಾರ್' ಪುನೀತ್ ರಾಜಕುಮಾರ್. ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, 'ನಮ್ಮ ಕುಟುಂಬಕ್ಕೆ ದಿನೇಶ್ ಬಾಬು ಅವರು ಬಹಳ ಆತ್ಮೀಯರು. ಶಿವಣ್ಣ‌ ಅವರ 'ಇನ್ಸ್‌ಪೆಕ್ಟರ್ ವಿಕ್ರಂ' ಹಾಗೂ ನನ್ನ ಅಭಿನಯದ 'ಅಭಿ' ಚಿತ್ರಗಳನ್ನು ದಿನೇಶ್ ಬಾಬು ನಿರ್ದೇಶಿಸಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ ಎಂದು ತಿಳಿದು ಸಂತೋಷವಾಯಿತು.‌ ಕನ್ನಡದಲ್ಲಿ ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ದಿನೇಶ್ ಬಾಬು, 100 ಚಿತ್ರಗಳ ನಿರ್ದೇಶನ ಮಾಡಲಿ' ಎಂದು ಶುಭ ಕೋರಿದರು.

'ಕಸ್ತೂರಿ ಮಹಲ್​' ಚಿತ್ರದ ಫಸ್ಟ್​ ಕಾಪಿ ಸದ್ಯದಲ್ಲೇ ಸಿದ್ದವಾಗಲಿದ್ದು, ಫೆಬ್ರವರಿಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಬಹುಭಾಷ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್, ಅಕ್ಷರ್ ಮುಂತಾದವರಿದ್ದಾರೆ.

ಕೊಟ್ಟಿಗೆ ಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣವಾಗಿರುವ ಹಾರಾರ್​​-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಶ್ರೀಭವಾನಿ‌ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ ನಿರ್ಮಿಸಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣವಿದೆ.