ಬೆಂಗಳೂರು: ಕೆಜಿಎಫ್ ಸಿನಿಮಾದಿಂದ ಸ್ಯಾಂಡಲ್ವುಡ್ನ ಚಹರೆಯೇ ಬದಲಾಗಿದೆ. ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ನೋಡುತ್ತಿದೆ. ಟ್ರೇಲರ್ ಲಾಂಚ್ ಮೂಲಕವೂ ಇಡೀ ಭಾರತೀಯ ಮಾಧ್ಯಮವನ್ನು ಬೆಂಗಳೂರಿಗೆ ಕರೆಸಿತ್ತು. ಎಲ್ಲರ ಸಮ್ಮುಖದಲ್ಲಿ ಐದು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆ ಆಗಿತ್ತು. ಆದರೆ, ಹಾಗೆ ಎಲ್ಲ ಮೀಡಿಯಾದವರನ್ನು ಕರೆದು ಆಹ್ವಾನಿಸಿದ್ದಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ‘ಶಾಂತಿ ಕ್ರಾಂತಿ’ ಸಿನಿಮಾನೇ ಕಾರಣವಂತೆ! ಈ ವಿಚಾವನ್ನು ಸ್ವತಃ ಚಿತ್ರತಂಡವೇ ಹೇಳಿಕೊಂಡಿದೆ.
ಹೌದು, 1991ರಲ್ಲಿ ಬಿಡುಗಡೆಯಾಗಿದ್ದ ‘ಶಾಂತಿ ಕ್ರಾಂತಿ’ ಸಿನಿಮಾ ಕನ್ನಡದ ಜತೆಗೆ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ತೆರೆಕಂಡಿತ್ತು. ಆಗಿನ ಕಾಲದಲ್ಲಿಯೇ ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗಿದ್ದ ಈ ಚಿತ್ರವನ್ನು ವಿ. ರವಿಚಂದ್ರನ್ ನಿರ್ದೇಶನ ಮಾಡಿದ್ದರು. ಆಗ ದಕ್ಷಿಣ ಭಾರತದ ಮೀಡಿಯಾವನ್ನು ಬೆಂಗಳೂರಿಗೆ ಕರೆಸಲಾಗಿತ್ತು. ಇದೀಗ ಆ ಚಿತ್ರದಿಂದಲೇ ಸ್ಫೂರ್ತಿ ಪಡೆದು ಕೆಜಿಎಫ್ ಚಿತ್ರದ ಟ್ರೇಲರ್ ಲಾಂಚ್ಗೆ ಇಡೀ ಇಂಡಿಯನ್ ಮೀಡಿಯಾ ಕರೆಸಿದ್ದರಂತೆ. ಹೀಗೆ ಈ ಸ್ಫೂರ್ತಿಯ ಕಥೆಯನ್ನು ಹೇಳಿಕೊಂಡಿದ್ದು, ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ. ಇದೆಲ್ಲವನ್ನು ಹೇಳಿಕೊಳ್ಳುವುದಕ್ಕೆ ಕಾರಣ, ಏ. 17ರಂದು ರವಿಚಂದ್ರನ್ ಅವರ ತಂದೆ ಎನ್ ವೀರಾಸ್ವಾಮಿ ಜನ್ಮದಿನ. ಅವರ ಫೋಟೋವನ್ನು ಶೇರ್ ಮಾಡಿಕೊಂಡು, ಒಂದಷ್ಟು ಬರೆದುಕೊಂಡಿದ್ದಾರೆ.