ಸಿನಿವಾಣಿ

'ಕಾಟೇರಾ' ಕಥೆ ಬರೆಸಿದ್ದು ನಾನೇ: ಶಾಕಿಂಗ್​ ಹೇಳಿಕೆ ನೀಡಿದ ಉಮಾಪತಿ ಶ್ರೀನಿವಾಸ್​

ಬೆಂಗಳೂರು: ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ. ಚಾಲೆಂಜಿಂಗ್​ ಸ್ವಾರ್​ ದರ್ಶನ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ದರ್ಶನ್ ನಟನೆ, ಮೇಕಿಂಗ್ ಎಲ್ಲದರ ಬಗ್ಗೆಯೂ ಸಿನಿರಸಿಕರು ಮೆಚ್ಚಿ ಕೊಂಡಾಡುತ್ತಿದ್ದಾರೆ. ರಾಕ್‌ಲೈನ್‌ ವೆಂಕಟೇಶ್ ಸಿನಿಮಾ ನಿರ್ಮಿಸಿದ್ದಾರೆ.

ಕಾಟೇರಾ ಬಿಡುಗಡೆಯಾದ ಮೊದಲ ವಾರದಲ್ಲಿ ಆರು ದಿನಗಳಲ್ಲೇ 100 ಕೋಟಿ ದಾಟುವ ಮೂಲಕ ತನ್ನನ್ನು ತಾನು ಸಾಬೀತುಪಡಿಸಿದೆ. ಚಿತ್ರವು 416 ಥಿಯೇಟರ್‌ಗಳಲ್ಲಿ ಮತ್ತು 72 ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು 200 ಕೋಟಿ ಕ್ಲಬ್‌ಗೆ ಸೇರಿದೆ. ಇದು ಹೊಸ ಬಾಕ್ಸ್ ಆಫೀಸ್ ದಾಖಲೆಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಚಿತ್ರದಲ್ಲಿ ಶ್ರುತಿ, ವಿನೋದ್ ಆಳ್ವಾ, ಕುಮಾರ್ ಗೋವಿಂದ್, ಜಗಪತಿ ಬಾಬು, ರೋಹಿತ್ ಪಿವಿ, ಮತ್ತು ಬಿರಾದಾ ಸೇರಿದಂತೆ ಪ್ರಮುಖ ಪಾತ್ರದಲ್ಲಿ ಆರಾಧನಾ ಸೇರಿದಂತೆ ಸಮಗ್ರ ತಾರಾಗಣವಿದೆ. ವಿ ಹರಿಕೃಷ್ಣ ಅವರ ಸಂಗೀತ ಮತ್ತು ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.

ಖಾಸಗಿ ಮಾಧ್ಯಮ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ಉಮಾಪತಿ ಶ್ರೀನಿವಾಸ್ ಅವರು, 'ಕಾಟೇರ' ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ. ರಾಬರ್ಟ್ ಸಿನಿಮಾ ಸಮಯದಲ್ಲಿ 'ಕಾಟೇರ' ಚಿತ್ರದ ಕಥೆಯನ್ನು ಸಹ ನಾನೇ ಬರೆಸಿದ್ದು ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಕಾಟೇರ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ. ಕಾಟೇರ ಟೈಟಲ್, ಕಥೆ ಬರೆಸಿದ್ದು ನಾನೇ. ಯಾರಿಗೆ ಏನು ಧಕ್ಕಬೇಕು ಅಂತ ಇರುತ್ತೋ ಅದು ಧಕ್ಕುತ್ತೆ. ನನ್ನ ಖುಷಿ ಏನು ಅಂದ್ರೆ ನನ್ನ ಜಡ್ಜ್‌ಮೆಂಟ್ ಎಲ್ಲೂ ತಪ್ಪಾಗಿಲ್ಲ. ನಿರ್ಮಾಪಕನಾಗಿ ಒಳ್ಳೆ ಕಥೆ ಆಯ್ಕೆ ಮಾಡಿದ ಖುಷಿಯಿದೆ. ರಾಕ್‌ಲೈನ್‌ ಸರ್ ಅಂದ್ರೆ ಬಹಳ ಪ್ರೀತಿಯಿದೆ. ಅವರ ಬ್ಯಾನರ್ ಸಿನ್ಮಾ ನನ್ನ ಬ್ಯಾನರ್ ಸಿನ್ಮಾ ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.

ಉಮಾಪತಿ ಶ್ರೀನಿವಾಸ್ ನಿರ್ಮಿಸಿ, ಚಿಕ್ಕಣ್ಣ ನಾಯಕನಾಗಿ ನಟಿಸಿರುವ ‘ಉಪಾಧ್ಯಕ್ಷ’ ಸಿನಿಮಾದ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಅವರೇ ಬಿಡುಗಡೆ ಮಾಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್, ಸಿನಿಮಾಕ್ಕೆ ಶುಭ ಕೋರಿದ ಜೊತೆಗೆ ಚಿಕ್ಕಣ್ಣನ ಪ್ರತಿಭೆ, ಶ್ರಮ ಹಾಗೂ ಉಮಾಪತಿ ಅವರ ಸಿನಿಮಾ ಪ್ರೀತಿಯನ್ನು ಕೊಂಡಾಡಿದ್ದರು.