ಬೆಂಗಳೂರು: ಬಾಲಿವುಡ್ ನಟಿ ಜಾಕ್ಲೀನ್ ಫರ್ನಾಂಡಿಸ್ ಕೆಲವು ದಿನಗಳಿಂದ ಇಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದರ ಪರಿಣಾಮ ಜಾಕ್ಲೀನ್ರ ಸಿನಿಮಾಗಳಿಗೆ ಸಮಸ್ಯೆ ಎದುರಾಗಿದೆ ಎನ್ನಲಾಗಿತ್ತು. ಕಿಚ್ಚ ಸುದೀಪ್ ಜೊತೆ ನಟಿಸಿರುವ ‘ವಿಕ್ರಾಂತ್ ರೋಣ’ ತೆರೆಗೆ ಬರಲು ರೆಡಿಯಾಗಿದ್ದು, ‘ಸರ್ಕಸ್’, ‘ರಾಮ್ೇತು’ ಚಿತ್ರಗಳಲ್ಲೂ ಜಾಕ್ಲೀನ್ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ‘ವಿಕ್ರಾಂತ್ ರೋಣ’ ಚಿತ್ರತಂಡ ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತು. ನಟಿ ಜಾಕ್ಲೀನ್ ಬೆಂಗಳೂರು, ಮುಂಬೈ ಹೊರತುಪಡಿಸಿದರೆ, ಬೇರೆ ಸುದ್ದಿಗೋಷ್ಠಿಗೆ ಆಗಮಿಸಿರಲಿಲ್ಲ. ಹೀಗಾಗಿ ಇಡಿ ಇಕ್ಕಟ್ಟಿನಿಂದಲೇ ಈ ಸಮಸ್ಯೆ ಎದುರಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದವು.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ, ‘ನಾವು ಹಿಂದೆ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾಗ ಜಾಕ್ಲೀನ್ ಡೇಟ್ಸ್ಗಳನ್ನು ನೀಡಿದ್ದರು. ಆದರೆ ನಾವು ರಿಲೀಸ್ ಡೇಟ್ಅನ್ನು ಮುಂದೂಡಬೇಕಾಯಿತು. ಆದರೆ, ಅವರು ಬೇರೆ ಚಿತ್ರಗಳಲ್ಲಿ ಬಿಜಿಯಾದರು. ಅದರ ನಡುವೆಯೂ ನಮ್ಮ ಚಿತ್ರದ ಪ್ರಚಾರಕ್ಕೆ ಸಮಯ ಮಾಡಿಕೊಂಡು ಬಂದರು. ಹೈದರಾಬಾದ್, ಕೊಚ್ಚಿ ಹಾಗೂ ಚೆನ್ನೈನಲ್ಲಿ ಪ್ರಚಾರಕ್ಕೆ ಬಾರದಿರಲು ಇಡಿ ವಿಚಾರಣೆ ಕಾರಣವಲ್ಲ. ಬದಲಾಗಿ ಅವರು ಬೇರೆ ಚಿತ್ರದ ಚಿತ್ರೀಕರಣದಲ್ಲಿ ಬಿಜಿ ಇದ್ದರು’ ಎನ್ನುತ್ತಾರೆ.
ಮತ್ತೊಮ್ಮೆ ಪಂಚರಾಜ್ಯ ಪ್ರವಾಸ: ‘ವಿಕ್ರಾಂತ್ ರೋಣ’ ಚಿತ್ರದ ರಿಲೀಸ್ ದಿನ ಹತ್ತಿರುವಾಗುತ್ತಿರುವಂತೆ ಚಿತ್ರದ ಪ್ರಚಾರಕ್ಕೂ ಚಿತ್ರತಂಡ ಮತ್ತಷ್ಟು ವೇಗ ನೀಡಲು ಮುಂದಾಗಿದೆ. ದೊಡ್ಡ ಕಾರ್ಯಕ್ರಮ ಆಯೋಜಿಸಿ ಆಡಿಯೋ ಲಾಂಚ್ ಆಲೋಚನೆಯೂ ಇದೆ. ಜತೆಗೆ ಮತ್ತೊಮ್ಮೆ ಐದೂ ರಾಜ್ಯಗಳಿಗೆ ತೆರಳಿ ಮತ್ತೊಂದು ಸುತ್ತಿನ ಪ್ರಚಾರ ಮಾಡಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದಹಾಗೆ ಇದೇ ಜುಲೈ 24ರಂದು ‘ವಿಕ್ರಾಂತ್ ರೋಣ’ ಥ್ರೀಡಿಯಲ್ಲಿ ತೆರೆಗೆ ಬರಲಿದೆ.