ಸಿನಿವಾಣಿ

ಗೆಲ್ಲದಿದ್ದರೂ ಇರಬೇಕಿತ್ತು ಫಿನಾಲೆಯಲ್ಲಿ; ಬಿಗ್​ಬಾಸ್ ಸೀಸನ್ 7ರ ಸ್ಪರ್ಧಿ, ಕಿರುತೆರೆ ನಟಿ ಪ್ರಿಯಾಂಕಾ ಶಿವಣ್ಣ

malli

ಬೆಂಗಳೂರು:  ‘105 ದಿನ ಬಿಗ್​ಬಾಸ್ ಮನೆಯಲ್ಲಿದ್ದು, ಫಿನಾಲೆಗೆ ಕೆಲವೇ ದಿನ ಇರುವಾಗ ಹೊರಬಂದಿದ್ದು ಬೇಸರ ತರಿಸಿದೆ. ಆದರೆ ಜನರ ತೀರ್ಮಾನ ಗೌರವಿಸಬೇಕಾಗುತ್ತದೆ’ ಎಂದರು ಬಿಗ್​ಬಾಸ್ ಸೀಸನ್ 7ರ ಸ್ಪರ್ಧಿ, ಕಿರುತೆರೆ ನಟಿ ಪ್ರಿಯಾಂಕಾ ಶಿವಣ್ಣ.

‘ಪ್ರೊಫೆಸರ್’ ಪ್ರಿಯಾಂಕಾ ಎಂತಲೇ ಹೆಸರಾಗಿರುವ ಇವರು, 15 ವಾರ ಬಿಗ್​ಬಾಸ್ ಜರ್ನಿ ಮುಗಿಸಿ ಹೊರಬಂದಿದ್ದಾರೆ. ನೇರ ನಡೆ-ನುಡಿ, ಸ್ನೇಹ ಮನೋಭಾವ, ತರ್ಲೆ ಮಾತು, ಟಾಸ್ಕ್​ನಲ್ಲಿ ಬೇರೆ ಸ್ಪರ್ಧಿಗಳಿಗೆ ಕೊಡುತ್ತಿದ್ದ ಪೈಪೋಟಿ ಈ ಮೂಲಕ ಬಿಗ್​ಬಾಸ್ ವೀಕ್ಷಕರಿಗೆ ಇಷ್ಟವಾಗಿದ್ದ ಇವರು, ಇಷ್ಟು ದಿನ ಬಿಗ್​ಬಾಸ್ ಮನೆಯಲ್ಲಿ ಇದ್ದದ್ದು ಖುಷಿ ಕೊಟ್ಟಿದೆ ಎಂದು ಹೇಳುತ್ತಾರೆ. ‘ಪ್ರತಿ ಸ್ಪರ್ಧಿಗೂ ತಕ್ಕ ಪೈಪೋಟಿ ನೀಡಿದ್ದೇನೆ. ಅವಕಾಶ ಸಿಕ್ಕಾಗ ಮನರಂಜನೆ ನೀಡಿದ್ದೇನೆ. ಆದರೆ ಗೆಲ್ಲುವುದು ಒಬ್ಬರೇ. ಈ ವಾರ ನಾನು ಹೊರಬಂದೆ.

ನಂತರ ಬೇರೆಯವರು ಬರುತ್ತಾರೆ. ಆದರೆ ನಾನು ಇನ್ನೂ ಬಿಗ್​ಬಾಸ್ ಮನೆಯಲ್ಲಿ ಇರಬೇಕಿತ್ತು’ ಎನ್ನುವ ಪ್ರಿಯಾಂಕಾ, ಬಿಗ್​ಬಾಸ್​ನಲ್ಲಿ ಗೆಲ್ಲಬೇಕು ಎನ್ನುವುದಕ್ಕಿಂತ ಫಿನಾಲೆ ವೇದಿಕೆಯಲ್ಲಿ ಇರಬೇಕಿತ್ತು ಎಂದು ಹೇಳಿದ್ದಾರೆ. ‘ಬಿಗ್​ಬಾಸ್ ಮನೆ ಒಂದೊಳ್ಳೆಯ ಅನುಭವ ನೀಡಿದೆ. ನಮ್ಮ ವ್ಯಕ್ತಿತ್ವ, ಸಾಮರ್ಥ್ಯ ಬಗ್ಗೆ ಅರಿವು ಮೂಡಿಸಿದೆ. ನಾನು ಹಿಂಜರಿಕೆ ಸ್ವಭಾವದವಳು. ಆದರೆ ಅದು ಬಿಗ್​ಬಾಸ್ ಮನೆಗೆ ಹೋಗಿಬಂದ ಮೇಲೆ ಮಾಯವಾಗಿದೆ. ಹೇಗೆ ಬದುಕಬೇಕು, ಯಾರೊಂದಿಗೆ ಹೇಗಿರಬೇಕು ಎಂಬುದನ್ನು ಕಲಿತಿದ್ದೇನೆ’ ಎನ್ನುತ್ತಾರೆ.

‘ಪ್ರತಿ ಟಾಸ್ಕ್ ಕೂಡ ನೆನಪಿನಲ್ಲಿದೆ. ಬಿಗ್​ಬಾಸ್ ಮನೆ, ಮೈಕ್, ಗಾರ್ಡನ್ ಏರಿಯಾ ಪ್ರತಿಯೊಂದನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಕಾಶ ಕೊಟ್ಟರೆ ಬಿಗ್​ಬಾಸ್ ಮುಂದಿನ ಸೀಸನ್​ಗೂ ಹೋಗುತ್ತೇನೆ’ ಎಂಬ ಆಸೆ ವ್ಯಕ್ತಪಡಿಸುತ್ತಾರೆ ಪ್ರಿಯಾಂಕಾ. ‘ಧಾರಾವಾಹಿಗಳಲ್ಲಿ ಅಭಿನಯಿಸಿದ್ದರೂ ಬಿಗ್​ಬಾಸ್ ಮನೆಗೆ ಹೋಗಿಬಂದ ಮೇಲೆ ಹೆಚ್ಚು ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಎಲ್ಲರೂ ಬಂದು ಮಾತನಾಡಿಸುವುದು ಖುಷಿ ಕೊಡುತ್ತಿದೆ.

ಬಿಗ್​ಬಾಸ್ ನನ್ನ ವೃತ್ತಿ ಜೀವನಕ್ಕೆ ಹಲವಾರು ಅವಕಾಶ ಕಲ್ಪಿಸುತ್ತದೆ ಎಂಬ ನಂಬಿಕೆ ಇದೆ’ ಎನ್ನುವ ವಿಶ್ವಾಸ ಪ್ರಿಯಾಂಕಾ ಅವರದ್ದು. ಬಿಗ್​ಬಾಸ್ ಟಾಪ್ ಮೂವರಲ್ಲಿ ಕುರಿ ಪ್ರತಾಪ್, ಶೈನ್ ಶೆಟ್ಟಿ, ವಾಸುಕಿ ಇರಬಹುದು ಎನ್ನುವ ಅವರು, ಕುರಿ ಪ್ರತಾಪ್ ವಿನ್ನರ್ ಆಗಬೇಕು, ಅವರೇ ಗೆಲ್ಲುತ್ತಾರೆ ಕೂಡ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

‘ಅಗ್ನಿಸಾಕ್ಷಿ’ ಧಾರಾವಾಹಿಯ ವಿಲನ್ ಚಂದ್ರಿಕಾ ಪಾತ್ರದಲ್ಲಿ ವೀಕ್ಷಕರ ಮನೆಗೆದ್ದಿದ್ದ ಪ್ರಿಯಾಂಕಾ, ಸದ್ಯ ಬಿಗ್​ಬಾಸ್ ಮೂಲಕವೂ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ‘‘ಪಿರಿಯಾಧ ವರಾಮ್ ವೆಂಡಮ್ ತಮಿಳು ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು, ಸಿನಿಮಾ ಅವಕಾಶಗಳಿಗೆ ಕಾಯುತ್ತಿದ್ದೇನೆ’ ಎನ್ನುತ್ತಾರೆ ಪ್ರಿಯಾಂಕಾ.