ಸಿನಿವಾಣಿ

ಲಾಕ್‌ಡೌನ್ ಇದ್ದರೂ ಶೂಟಿಂಗ್‌ನಲ್ಲಿ ಈ ನಟ ಭಾಗಿ; ಮೋದಿ ಆದೇಶಕ್ಕೆ ಕಿಮ್ಮತ್ತಿಲ್ಲವೇ?

ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಬಹುತೇಕ ಕೆಲಸಗಳು ಕರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿವೆ. ಎಲ್ಲರೂ, ಮನೆಯಲ್ಲಿ ರೆಸ್ಟ್ ಮೂಡ್‌ನಲ್ಲಿ ಒಂದಷ್ಟು ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡುತ್ತ, ಬಗೆಬಗೆ ಅಡುಗೆ ಮಾಡುತ್ತ ದಿನದೂಡುತ್ತಿದ್ದಾರೆ. ಆದರೆ, ಈ ಚಿತ್ರತಂಡ ಮಾತ್ರ ಇನ್ನೂ ಶೂಟಿಂಗ್ ಮಾಡಿಕೊಳ್ಳುತ್ತಿದೆ!

ಹೌದು, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ‘ಆಡು ಜೀವಿತಂ’ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದಷ್ಟು ಸಹಾಯಕರನ್ನು ನೇಮಿಸಿಕೊಂಡು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಅದೂ ದೂರದ ಜೋರ್ಡಾನ್‌ನಲ್ಲಿ. ಹಾಗಾದರೆ, ಮೋದಿ ಮಾತು ಈ ಚಿತ್ರತಂಡಕ್ಕೆ ಅನ್ವಯಿಸುವುದಿಲ್ಲವೇ? ಆ ಬಗ್ಗೆ ಚಿತ್ರದ ನಾಯಕ ಪ್ರಥ್ವಿರಾಜ್ ವಿವರಣೆ ನೀಡುವುದು ಹೀಗೆ.

‘ಲಾಕ್‌ಡೌನ್ ಆಗುವುದಕ್ಕೂ ಮುನ್ನ ನಾವು ಜೋರ್ಡಾನ್‌ನ ವಾದಿ ರಮ್ ಪ್ರದೇಶದಲ್ಲಿ ಶೂಟಿಂಗ್ ಆರಂಭಿಸಿದ್ದೆವು. ಈಗಲೂ ಇಲ್ಲೇ ಇದ್ದೇವೆ. ಮರಳುಗಾಡಿನಲ್ಲೇ ನಮ್ಮ ತಂಡದಿಂದಲೇ ಕ್ಯಾಂಪ್ ಹಾಕಿದ್ದೇವೆ. ಜೋರ್ಡಾನ್‌ನಿಂದ ಯಾವುದೇ ವಿಮಾನ ಸೇವೆ ಇಲ್ಲದ ಕಾರಣ ಇಲ್ಲಿಯೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಕರೊನಾ ಬಗ್ಗೆ ಸಾಕಷ್ಟು ಜಾಗೃತೆಯನ್ನೂ ವಹಿಸಿದ್ದೇವೆ. ಇಲ್ಲಿನ ಕೆಲ ಅಥಾರಿಟಿಗಳನ್ನು ಸಂಪರ್ಕಿಸಿ ಅವರಿಂದ ವೈದ್ಯಕೀಯ ತಪಾಸಣೆಯನ್ನೂ ಮಾಡಲಾಗುತ್ತಿದೆ. ಒಂದಿಷ್ಟು ಮಂದಿಯನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಜತೆಗೆ ಶೂಟಿಂಗ್ ಸಹ ಮುಂದುವರಿದಿದೆ. ಲಾಕ್‌ಡೌನ್ ತೆರವಾಗುತ್ತಿದ್ದಂತೆ ದೇಶಕ್ಕೆ ಮರಳಲಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ಅರಬ್ ರಾಷ್ಟ್ರಗಳಲ್ಲಿ ಕರೊನಾ ವೈರಸ್ ದೊಡ್ಡ ಮಟ್ಟದಲ್ಲಿ ಆವರಿಸಿದೆ. ಆ ಪ್ರದೇಶಕ್ಕೆ ಹೊಂದಿಕೊಂಡಿರುವ ಜೋರ್ಡಾನ್‌ನಲ್ಲಿ ಪ್ರಥ್ವಿರಾಜ್ ಆ್ಯಂಡ್ ಟೀಮ್ ಬೀಡು ಬಿಟ್ಟಿದೆ. ಅಲ್ಲಿನ ಮರಳುಗಾಡಲ್ಲಿ ದೃಶ್ಯಾವಳಿಗಳನ್ನು ಸೆರೆಹಿಡಿಯುತ್ತಿದೆ. ನಿರ್ದೇಶಕ ಬ್ಲೆಸ್ಸಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.