ಸಿನಿವಾಣಿ

ಶಾರೂಖ್​ ಹಿಂದಿನ ದಾಖಲೆಗಳನ್ನು 'ಜವಾನ್'​ ಮುರಿಯಲಿದೆ: ಪ್ರಿನ್ಸ್ ಮಹೇಶ್​ ಬಾಬು

ಆಂಧ್ರಪ್ರದೇಶ: ಸೆಪ್ಟಂಬರ್ 07 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಬಾಲಿವುಡ್​ ಕಿಂಗ್​ ಖಾನ್​ ನಟನೆಯ 'ಜವಾನ್'​ ಚಿತ್ರಕ್ಕೆ ಸಿನಿಪ್ರೇಕ್ಷಕರು ಫಿದಾ ಆಗಿದ್ದು, ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಎಸ್​ಆರ್​ಕೆ ಮತ್ತು ಚಿತ್ರತಂಡದ ಕೆಲಸಕ್ಕೆ ಟ್ವೀಟ್​ ಮುಖೇನ ಇದೀಗ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

'ಪಠಾಣ್' ನಂತರ 'ಜವಾನ್'​ ಮೂಲಕ ಮತ್ತೊಮ್ಮೆ ತೆರೆ ಮೇಲೆ ಅಭಿಮಾನಿಗಳನ್ನು ಮನರಂಜಿಸಲು ಹಾಜರಾದ ಶಾರೂಖ್​ ಖಾನ್​ ನಟನೆ ವೀಕ್ಷಿಸಿದ ಸಿನಿಪ್ರೇಕ್ಷಕರು, ಇದೀಗ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಸಿನಿಮಾದಲ್ಲಿ ಎಸ್​ಆರ್​ಕೆಗೆ ನಾಯಕಿಯಾಗಿ ಕಾಣಿಸಿಕೊಂಡ ನಟಿ ನಯನತಾರ ಮತ್ತು ಪ್ರಮುಖ ಪಾತ್ರದಲ್ಲಿ ಮಿಂಚಿದ ವಿಜಯ್​ ಸೇತುಪತಿ ಪಾತ್ರಗಳನ್ನು ಕೂಡ ಪ್ರೇಕ್ಷಕರು ಮೆಚ್ಚಿದ್ದಾರೆ.

ಚಿತ್ರ ವೀಕ್ಷಿಸಿದ ತೆಲುಗು ಚಿತ್ರರಂಗದ ಪ್ರಿನ್ಸ್​ ಮಹೇಶ್​ ಬಾಬು, "ಜವಾನ್​ ಬ್ಲಾಕ್​ಬಸ್ಟರ್​ ಸಿನಿಮಾ. ನಿರ್ದೇಶಕ ಅಟ್ಲಿ ಕಿಂಗ್​ ಜತೆಗೆ ಕಿಂಗ್​ ಗಾತ್ರದ ಮನರಂಜನೆಯನ್ನು ನೀಡಿದ್ದಾರೆ. ಇದು ಅವರ ವೃತ್ತಿಯ ಅತ್ಯುತ್ತಮ ಚಿತ್ರ. ಎಸ್​ಆರ್​ಕೆ ಲುಕ್​, ನಟನೆ, ಪರದೆಯ ಮೇಲೆ ಕಾಣಿಸಿಕೊಂಡ ಪರಿ ಅದ್ಭುತ. ಜವಾನ್​ ಶಾರೂಖ್​ ಅವರ ಹಿಂದಿನ ದಾಖಲೆಗಳನ್ನು ಮುರಿಯಲಿದೆ" ಎಂದು ಟ್ವೀಟ್​ ಮಾಡಿದ್ದಾರೆ.

ಸದ್ಯ ಪ್ರಿನ್ಸ್​ ಟ್ವೀಟ್​ಗೆ ಶಾರೂಖ್​ ಫ್ಯಾನ್ಸ್​ ಸಂತಸ ಪಟ್ಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಿ-ಟ್ವೀಟ್​ ಮಾಡಿದ್ದಾರೆ.