ಪ್ರೇಮದ ಊರಲಿ ಚಿತ್ರದ ಪೋಸ್ಟರ್ 
ಸಿನಿವಾಣಿ

Premada Oorali - ಪ್ರೇಮದ ಊರಿಗೆ ಪ್ರೀತಿಯ ಅಪ್ಪುಗೆ - ಹೊಡಿ, ಬಡಿ, ಕಡಿ ಚಿತ್ರಗಳಿಂದ ಬ್ರೇಕ್​, ಥಿಯೇಟರ್​ಗಳತ್ತ ಮುಖ ಮಾಡಿದ ಪ್ರೇಕ್ಷಕರು

ಸ್ಟಾರ್​ ಸಿನಿಮಾಗಳಿಗಷ್ಟೇ ಜನ ಬರುತ್ತಾರೆ. ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆಯಿದೆ. ಕುಟುಂಬಗಳು ಥಿಯೇಟರ್​ಗಳಿಂದ ದೂರಾಗಿವೆ. ಒಟಿಟಿ ಅಬ್ಬರದ ನಡುವೆ ಸಿನಿಮಾ ಮಂದಿರಗಳು ಕಳೆದುಹೋಗುತ್ತಿವೆ... ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಹುತೇಕ ಚಿತ್ರಗಳ ಕಂಪ್ಲೇಂಟ್​ ಇದು. ಆದರೆ, ರಿಲೀಸ್​ ಸಮಯದಲ್ಲಿ ಥಿಯೇಟರ್​ ಸಮಸ್ಯೆ ಎದುರಿಸಿದ ಚಿತ್ರವೊಂದು ಇದೀಗ ನಾಲ್ಕನೇ ದಿನದಲ್ಲಿ ಮೊದಲ ದಿನಕ್ಕಿಂತ ನಾಲ್ಕು ಪಟ್ಟು ಶೋಗಳನ್ನು ಹೆಚ್ಚಿಸಿಕೊಂಡಿದೆ. ಅದೇ "ಪ್ರೇಮದ ಊರಲಿ'.

ಬೆಂಗಳೂರು: ಸ್ಟಾರ್​ ಸಿನಿಮಾಗಳಿಗಷ್ಟೇ ಜನ ಬರುತ್ತಾರೆ. ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆಯಿದೆ. ಕುಟುಂಬಗಳು ಥಿಯೇಟರ್​ಗಳಿಂದ ದೂರಾಗಿವೆ. ಒಟಿಟಿ ಅಬ್ಬರದ ನಡುವೆ ಸಿನಿಮಾ ಮಂದಿರಗಳು ಕಳೆದುಹೋಗುತ್ತಿವೆ... ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಬಹುತೇಕ ಚಿತ್ರಗಳ ಕಂಪ್ಲೇಂಟ್​ ಇದು. ಆದರೆ, ರಿಲೀಸ್​ ಸಮಯದಲ್ಲಿ ಥಿಯೇಟರ್​ ಸಮಸ್ಯೆ ಎದುರಿಸಿದ ಚಿತ್ರವೊಂದು ಇದೀಗ ನಾಲ್ಕನೇ ದಿನದಲ್ಲಿ ಮೊದಲ ದಿನಕ್ಕಿಂತ ನಾಲ್ಕು ಪಟ್ಟು ಶೋಗಳನ್ನು ಹೆಚ್ಚಿಸಿಕೊಂಡಿದೆ. ಅದೇ "ಪ್ರೇಮದ ಊರಲಿ'. ಕಳೆದ ಶುಕ್ರವಾರ (ಸೆ. 25) ರಾಜ್ಯಾದ್ಯಂತ ಕೇವಲ 40 ಸ್ಕ್ರೀನ್​ಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಮೊದಲ ದಿನ ಸಿಕ್ಕಿದ್ದು 60 ಪ್ರದರ್ಶನಗಳಷ್ಟೇ. ಅದಕ್ಕೆ ಕಾರಣ ಕನ್ನಡದಲ್ಲಿ ಒಟ್ಟು ಏಳು ಸಿನಿಮಾಗಳು ಬಿಡುಗಡೆಯಾಗಿದ್ದವು. ಜತೆಗೆ ತೆಲುಗಿನ ಪ್ಯಾನ್​ ಇಂಡಿಯಾ "ಪ್ಯಾರಡೈಸ್​' ಕೂಡ ರಿಲೀಸ್​ ಆಗಿತ್ತು. ಆದರೆ, ತೆಲುಗಿನ ರಕ್ತಸಿಕ್ತ ಅಧ್ಯಾಯಕ್ಕಿಂತ, ಕನ್ನಡದ "ಪ್ರೇಮದ ಊರಿನ' ಸಂಬಂಧಗಳ ಸಂಭ್ರಮ ಪ್ರೇಕ್ಷಕರಿಗೆ ಇಷ್ಟವಾಯಿತು. ಎರಡನೇ ದಿನವೇ ಚಿತ್ರ ಹೆಚ್ಚುವರಿ 70 ಶೋಗಳನ್ನು ಪಡೆದು, 130ಕ್ಕೆ ಸಂಖ್ಯೆ ಹೆಚ್ಚಿಸಿಕೊಂಡಿತ್ತು. ಶನಿವಾರವೂ ಹಲವೆಡೆ ಹೌಸ್​ಫುಲ್​ ಪ್ರದರ್ಶನ ಕಂಡ ಕಾರಣ, ಭಾನುವಾರ 200 ದಾಟಿದ್ದು, ಸೋಮವಾರ ಮತ್ತಷ್ಟು ಹೊಸ ಶೋಗಳು, ಸ್ಕ್ರೀನ್​ಗಳು ಸೇರಿಕೊಂಡಿವೆ.

ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವ ಸಿನಿಮಾ

ಕೈ ಹಿಡಿದ ಕೌಟುಂಬಿಕ ಪ್ರೇಕ್ಷಕರು

ಪ್ಯಾನ್​ ಇಂಡಿಯಾ ಮಾಸ್​, ಮಸಾಲಾ, ಆ್ಯಕ್ಷನ್​ ಅಬ್ಬರಗಳ ನಡುವೆ "ಅಕ್ಷಿ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್​ ಕುಮಾರ್​, "ಪ್ರೇಮದ ಊರಲಿ' ಮೂಲಕ ರೊಮ್ಯಾಂಟಿಕ್​ ಫ್ಯಾಮಿಲಿ ಡ್ರಾಮಾ ನಿರೂಪಿಸಿದ್ದಾರೆ. ಹಚ್ಚ ಹಸಿರಿನ ನಡುವೆ ನಡೆಯುವ ಸರಳ, ಸುಂದರ, ಭಾವನಾತ್ಮಕ ಹಳ್ಳಿ ಕಥೆಯಿದು. ಈ ಫೀಲ್​ ಗುಡ್​ ಚಿತ್ರದಲ್ಲಿ ಶ್ರೀರಾಮ್​, ರಂಗಾಯಣ ರು, ರಮಿಕ ಶಿವು ಮತ್ತು ತಪಸ್ವಿನಿ ಪೂಣಚ್ಚ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ನಿರ್ದೇಶಕ ಮನೋಜ್​ ಕಲ್ಪನೆಗೆ ಪಾತ್ರಗಳು ಜೀವ ತುಂಬಿದ್ದರೆ, ಸುನಾದ್​ ಗೌತಮ್​ ಸಂಗೀತ, ರಾಜ್​ಕಾಂತ್​ ಛಾಯಾಗ್ರಹಣ ಉಸಿರು ನೀಡಿವೆ. "ಮುಂದಿನ ಶುಕ್ರವಾರದಿಂದ ಸಿನಿಮಾ ಪಿಕ್​ ಆಗಬಹುದು ಅಂತಂದುಕೊಂಡಿದ್ದೆ. ಆದರೆ, ಬಿಡುಗಡೆಯ ದಿನದಿಂದಲೇ ಪ್ರೇಕ್ಷಕರು ಬರುತ್ತಿದ್ದಾರೆ. ಜನರಿಗೆ ನಮ್ಮ ಸಿನಿಮಾ ಹೊಸದಾಗಿ ಕಾಣಿಸುತ್ತಿದೆ. ಕಥೆಯ ಜತೆ ತಾವೂ ಪಯಣಿಸುತ್ತಿದ್ದಾರೆ. ಅವರಿಗೂ ಫೀಲ್​ ಆಗುತ್ತಿದೆ. ಸಂಭಾಷಣೆ, ಸೀನ್​ಗಳು ಕಿರಿಕಿರಿಯಾಗುತ್ತಿಲ್ಲ. ಹೀರೋಯಿಸಂಗಾಗಿ ಫೈಟ್​ಗಳಿಲ್ಲ. ಹೀಗಾಗಿ ನಮ್ಮ ಪ್ರೇಮದೂರಿಗೆ ಬಂದು ಹೋಗುತ್ತಿದ್ದಾರೆ. ಅಲ್ಲಿನ ನೋವು, ನಲಿವು, ಎಮೋಷನ್ಸ್​ ಕಾಡುತ್ತಿದೆ. ನಾಗಣ್ಣ (ರಂಗಾಯಣ ರು), ಸಂತು (ಶ್ರೀರಾಮ್​), ವಸಂತಾ (ರಮಿಕ) ಮತ್ತು ರುಕ್ಮಿಣಿ (ತಪಸ್ವಿನಿ) ಹೀಗೆ ಒಂದೊಂದು ಪಾತ್ರವೂ ಒಬ್ಬೊಬ್ಬರಿಗೆ ಕನೆಕ್ಟ್​ ಆಗುತ್ತಿದೆ. ನಮಗೂ ಹೀಗಾಗಿತ್ತಲ್ಲಾ ಅಂತ ಗಾಢವಾಗಿ ರಿಲೇಟ್​ ಆಗುತ್ತಿದ್ದಾರೆ. ಸುನಾದ್​ ಸಂಗೀತ, ರಾಜ್​ಕಾಂತ್​ ಛಾಯಾಗ್ರಹಣ ಸೇರಿ ತಾಂತ್ರಿಕವಾಗಿಯೂ ಸೆಳೆಯುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಇಂತಹ ಕಥೆಗಳನ್ನು ನಿರ್ಮಿಸಲು ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆದರೆ, ಆ ಧೈರ್ಯ ಮಾಡಿದ ದೇವೇಂದ್ರ ಈ ಸಿನಿಮಾದ ಮೊದಲ ಹೀರೋ' ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ನಿರ್ದೇಶಕ ಮನೋಜ್ ಕುಮಾರ್

ಎಲ್ಲೆಲ್ಲಿ ಎಷ್ಟೆಷ್ಟು?

"ಪ್ರೇಮದ ಊರಲಿ' ಚಿತ್ರ ಮಂಗಳವಾರ ಬೆಂಗಳೂರಿನ 42 ಸ್ಕ್ರೀನ್​ಗಳಲ್ಲಿ ಬರೋಬ್ಬರಿ 120ಕ್ಕೂ ಅಧಿಕ ಶೋಗಳನ್ನು ಪಡೆದಿದೆ. ಜತೆಗೆ ಮೈಸೂರಿನಲ್ಲಿ 7 ಸ್ಕ್ರೀನ್​ಗಳಲ್ಲಿ 34 ಶೋಗಳು, ಹುಬ್ಬಳ್ಳಿ & ಧಾರವಾಡ 14, ಕಲಬುರ್ಗಿ 12, ಬೆಳಗಾವಿ 6 ಮತ್ತು ವಿಜಯಪುರ ತಲಾ 6, ದಾವಣಗೆರೆ, ಶಿವಮೊಗ್ಗ ಹಾಗೂ ಉಡುಪಿಯಲ್ಲಿ ತಲಾ 5, ಮಂಗಳೂರಿನಲ್ಲಿ, ತುಮಕೂರು, ಬಳ್ಳಾರಿ, ಚಿಕ್ಕಮಗಳೂರು, ಹಾಸನ್​ ಹಾಗೂ ಕೊಡಗಿನಲ್ಲಿ ತಲಾ 4 ಶೋಗಳು, ಚಿತ್ರದುರ್ಗದಲ್ಲಿ 3 ಶೋಗಳು ಸೇರಿ ರಾಜ್ಯಾದ್ಯಂತ ಮಂಗಳವಾರ ಪ್ರದರ್ಶನಗಳ ಸಂಖ್ಯೆ 250 ದಾಟಿದೆ. ಆ ಮೂಲಕ ಮೊದಲ ದಿನ ಕೇವಲ 60 ಇದ್ದ ಶೋಗಳ ಸಂಖ್ಯೆ ಐದನೇ ದಿನಕ್ಕೆ ಅದರ ನಾಲ್ಕು ಪಟ್ಟು ದಾಟಿದೆ.