ಕಥೆ, ಪಾತ್ರ ಯಾವುದೂ ಹೊಸತಲ್ಲ! ಇಷ್ಟಾದ್ರೂ 'ಪ್ರೇಮದ ಊರಲಿ' ಹೌಸ್​ಫುಲ್​ ಶೋಗಳ​​ ಹಿಂದಿದೆ ಅದೊಂದು ಕಾರಣ | Premada Oorali  
ಸಿನಿವಾಣಿ

ಕಥೆ, ಪಾತ್ರ ಯಾವುದೂ ಹೊಸತಲ್ಲ! ಇಷ್ಟಾದ್ರೂ 'ಪ್ರೇಮದ ಊರಲಿ' ಹೌಸ್​ಫುಲ್​ ಶೋಗಳ ಹಿಂದಿದೆ​​ ಈ ಸೀಕ್ರೆಟ್​ | Premada Oorali

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರೇಮದ ಊರಲಿ ಸಿನಿಮಾಗೆ ಅಭೂತಪೂರ್ವ ಗೆಲುವು ಸಿಕ್ಕಿರುವುದೇನೋ ನಿಜ. ಆದರೆ, ಅದನ್ನೂ ಮೀರಿದ ಯಶಸ್ಸೊಂದು ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ ಬಗ್ಗೆ ಮಾತನಾಡಿಕೊಳ್ಳುವಂತೆ ಮಾಡಿರುವುದು ನಿಜಕ್ಕೂ ತೃಪ್ತಿದಾಯಕ ಗೆಲುವಾಗಿದೆ.

ಬೆಂಗಳೂರು: ರಾಜ್ಯಾದ್ಯಂತ 28 ದಿನಗಳು ಕಳೆದರೂ ಅತ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಪ್ರೇಮದ ಊರಲಿ' (Premada Oorali) ಚಿತ್ರವು ಇದೀಗ ಸ್ಯಾಂಡಲ್​ವುಡ್​ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯುವುದರ ಜತೆಗೆ ಒಂದೊಳ್ಳೆ ನವೀರಾದ ಪ್ರೇಮಕಥೆ ಎಂಬ ಸಿನಿಪ್ರಿಯರ ಮೆಚ್ಚುಗೆ, ಪ್ರಶಂಸೆಗಳಿಗೆ ಸಾಕ್ಷಿಯಾಗಿದೆ. ಕೇವಲ 2 ಕೋಟಿ ಬಜೆಟ್​ನ ಚಿತ್ರ ಇಂದು105 ಕೋಟಿ ರೂ. ಗಡಿದಾಟಿ ಕಲೆಕ್ಷನ್​ ನೋಡುತ್ತಿದೆ ಎಂದರೆ, ಈ ಗೆಲುವಿನ ಹಿಂದೆ ಕೇವಲ ಕಥೆ, ದೃಶ್ಯಗಳು, ಕಲಾವಿದರ ನಟನೆ, ಹಾಡುಗಳು, ಚಿತ್ರೀಕರಣದ ಸ್ಥಳಕ್ಕಿಂತಲೂ ಒಂದೇ ಒಂದು ಅಂಶ ಮಾತ್ರ ಪ್ರೇಕ್ಷಕರ ಹೃದಯವನ್ನು ಹೊಕ್ಕಿ, ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಗೆಲುವನ್ನು ತಂದುಕೊಟ್ಟಿದೆ. ಅದೇನೆಂದರೆ...

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರೇಮದ ಊರಲಿ ಸಿನಿಮಾಗೆ ಅಭೂತಪೂರ್ವ ಗೆಲುವು ಸಿಕ್ಕಿರುವುದೇನೋ ನಿಜ. ಆದರೆ, ಅದನ್ನೂ ಮೀರಿದ ಯಶಸ್ಸೊಂದು ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ ಬಗ್ಗೆ ಮಾತನಾಡಿಕೊಳ್ಳುವಂತೆ ಮಾಡಿರುವುದು ನಿಜಕ್ಕೂ ತೃಪ್ತಿದಾಯಕ ಗೆಲುವಾಗಿದೆ. ಬಿಡುಗಡೆಯಾಗಿ ನಾಲ್ಕು ವಾರಗಳೇ ಕಳೆದರೂ ಇಂದಿಗೂ ಚಿತ್ರವನ್ನು ನೋಡಲು ಜನರು ಮಲ್ಟಿಪ್ಲೆಕ್ಸ್​ಗಳು ಇರಲಿ, ಹಳೆಯ ಥಿಯೇಟರ್​ಗಳ ಬಳಿ ಸಾಲುಗಟ್ಟಿ ಟಿಕೆಟ್​ಗಾಗಿ ನಿಲ್ಲುತ್ತಿದ್ದಾರೆ ಎಂದರೆ ಸಿನಿಮಾದ ಕ್ರೇಜ್​ ಎಷ್ಟಿದೆ ಎಂಬುದನ್ನು ನೀವೇ ಊಹಿಸಿ.

ಹೀರೋ ಸೆಂಟ್ರಿಕ್​ ಅಲ್ಲ!

ಸ್ಟಾರ್​ ನಟ, ನಟಿಯರು ಇದ್ದಾರಾ? ಇಲ್ಲ. ಕಥೆ ಏನಾದರೂ ಹೊಸತಾ? ಅದು ಇಲ್ಲ. ಹಿಂದೆಂದೂ ಕಾಣದ ನವೀರಾದ ಪ್ರೇಮಕಥೆನಾ? ಅದು ಅಲ್ಲಾ. ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಬಂದಿರುವ ಕಥೆಗಳೇ, ಪಾತ್ರಗಳೇ ಆದರೂ ಚಿತ್ರಕ್ಕೆ ಈ ಪಾಟಿ ಗೆಲುವು ಸಿಕ್ಕಲು ಅಂತದ್ದೇನು ಕಾರಣ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ತಿಳಿಯುವುದೇ ನಮ್ಮ ಸುತ್ತಮುತ್ತಲು ನಡೆಯುವ ನೈಜ ಭಾವನೆಗಳನ್ನು ಪ್ರೇಕ್ಷಕರ ಕಣ್ಣಂಚಿಗೆ ತಳ್ಳುವುದು. ಇದೇ ಸಿನಿಪ್ರೇಕ್ಷಕರನ್ನು ಇಂದಿಗೂ ಚಿತ್ರಮಂದಿರಗಳಲ್ಲಿ ನೂಕುನುಗ್ಗಲಾದರೂ ಟಿಕೆಟ್​ ಖರೀದಿಸಿ, ಸಿನಿಮಾ ನೋಡುವಂತೆ ಮಾಡುತ್ತಿರುವುದು.

ಎರಡರಿಂದ ಎರಡೂವರೆ ತಾಸು ಕುಳಿತು ಸಿನಿಮಾ ನೋಡಲು ಬರುವ ಪ್ರೇಕ್ಷಕರ ಉದ್ದೇಶವೇ, ತಮ್ಮನ್ನು ತಾವೇ ಮರೆತು ಚಿತ್ರದಲ್ಲಿನ ಪಾತ್ರಗಳೊಂದಿಗೆ ಬೆರೆತು ಹೋಗಲು ಮತ್ತು ಕಥೆಯೊಂದಿಗೆ ಜೀವಿಸಲು. ನಮ್ಮ ಸುತ್ತಲೇ ನಡೆಯುತ್ತಿರುವ ಘಟನೆ ಎಂಬಂತೆ ಅವರು ನೋಡಲು ಬಯಸುತ್ತಾರೆ. ಇದೆಲ್ಲವೂ ಅಂದುಕೊಂಡಂತೆ ಆದರೆ, ಆ ಕಥೆಗಳಲ್ಲಿ ಅವರು ಸಂಪೂರ್ಣವಾಗಿ ಮಗ್ನರಾಗಿಬಿಡುತ್ತಾರೆ. ಪ್ರೇಮದ ಊರಿನಲಿ ಚಿತ್ರದಲ್ಲೂ ಆಗಿದ್ದು ಇದೆಯೇ.

ಪ್ರೇಕ್ಷಕರಿಗೆ ತೃಪ್ತಿ

ತಮ್ಮ ಸಿನಿಮಾವನ್ನು ನೋಡಲು ಚಿತ್ರಮಂದಿರಗಳಲ್ಲಿ ಹಣ ಕೊಟ್ಟು ಬಂದ ಪ್ರೇಕ್ಷಕರನ್ನು ಪಾತ್ರಗಳ ಹಿನ್ನೆಲೆ ಹುಡುಕಲು ಸಮಯ ಕೊಡದೆ, ಅವರನ್ನು ತಮ್ಮ ಪಯಣದಲ್ಲಿ ಕರೆದುಕೊಂಡು ಹೋಗುತ್ತದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆಯಲ್ಲಿ ಪ್ರತಿಯೊಂದು ಪಾತ್ರಗಳು ನಮ್ಮವರೇ ಯಾರೋ, ನಮಗೆ ಗೊತ್ತಿರುವಂತೆ ಅನಿಸುತ್ತದೆ. ಅವರ ಖುಷಿ, ತೊಳಲಾಟ, ಕಣ್ಣೀರು ನಮ್ಮಲ್ಲೂ ಮೂಡಿಸುವಂತೆ ಮಾಡುತ್ತದೆ. ಆ ಮಟ್ಟಿಗೆ, ಪ್ರೇಕ್ಷಕರ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಿನಿಮಾ ಯಶಸ್ವಿಯಾಗಿದೆ.

ಸಾಮಾನ್ನಾಯವಾಗಿ ಹಲವಾರು ಚಿತ್ರಗಳಲ್ಲಿ ನಾಯಕ, ನಾಯಕಿ ಇಡೀ ಸಿನಿಮಾವನ್ನು ಹೈಲೈಟ್​ ಮಾಡಿದರೆ, ಇಲ್ಲಿ ಒಂದು ಚಿತ್ರವೇ ಹೀರೋ, ಹೀರೋಯಿನ್​, ಪೋಷಕ ಪಾತ್ರಗಳನ್ನು ಜನರಿಗೆ ಪರಿಚಯಿಸುತ್ತದೆ ಎಂದರೆ ಕಥೆಯ ಜೀವಾಳ, ತೋರಿಸಿರುವ ರೀತಿ ಇಲ್ಲಿ ಗೆದ್ದಿದೆ ಎಂದರ್ಥ. ಹಾಸನದ ಸೀಗೆಗುಡ್ಡ ಎಂಬ ಹಸಿರುಮಯ ಗ್ರಾಮದಲ್ಲಿ ನಡೆಯುವ ಪೂರ್ತಿ ಕಥೆಯು, ರೈತನ ಕುಟುಂಬ ಮತ್ತು ಸಿಟಿ ಹುಡುಗಿಯ ಬದುಕು, ಕಣ್ಣೀರು, ಸ್ವಚ್ಛ ವಾತಾವರಣ ಸೇರಿದಂತೆ ಕೌಟುಂಬಿಕ ಪರಿಸ್ಥಿತಿಗಳನ್ನೇ ಅಚ್ಚುಕಟ್ಟಾಗಿ ಹೆಣದಿರುವುದರಿಂದ ನೋಡುಗರ ಮನಸ್ಸುಗಳಲ್ಲಿ ಆಳವಾಗಿ ಬೇರೂರಿದೆ.

ನಟ ಶ್ರೀ ರಾಮ್ (ಸಂತು), ಹಿರಿಯ ನಟ ರಂಗಾಯಣ ರಘು (ನಾಗಣ್ಣ) ಮತ್ತು ನಟಿಯರಾದ ರಮಿಕಾ ಶಿವು (ವಸಂತ), ತಪಸ್ವಿನಿ ಪೂಣಚ್ಚ (ರುಕ್ಮಿಣಿ) ತಮ್ಮ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಬರುವ 'ಪ್ರೇಮದ ಊರಲಿ, ಹೃದಯದ ತೇರಲಿ' ಎಂಬ ಟೈಟಲ್​ ಸಾಂಗ್​ಗೆ ಇನ್ನಷ್ಟು ಜೀವ ತುಂಬಿಸಿದ ಸುನಾದ್​ ಗೌತಮ್​, ಇದೊಂದು ಹಾಡು ಪ್ರೇಕ್ಷಕರ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ. ಒಟ್ಟಾರೆಯಾಗಿ, ಎಲ್ಲವೂ ಚಿತ್ರಕ್ಕೆ ಕೊಡುಗೆ ನೀಡಿದ್ದೇ ಆದರೂ ನಮ್ಮ ನಿಮ್ಮಲ್ಲೇ ನಡೆಯುವ ಸಣ್ಣ ಸಣ್ಣ ವಿಷಯಗಳನ್ನೇ ದೊಡ್ಡ ಪರದೆಯಲ್ಲಿ ನೈಜ ಎನ್ನುವಂತೆ ತೋರಿಸುವ ಮೂಲಕ ಭಾವನಾತ್ಮಕವಾಗಿ ಪ್ರೇಕ್ಷಕರನ್ನೂ ತಮ್ಮ ಚಿತ್ರದಲ್ಲಿ ಜೀವಿಸುವಂತೆ ಮಾಡಿದ ಕಲಾವಿದರು ಮತ್ತು ನಿರ್ದೆಶಕರ ಶ್ರಮಕ್ಕೆ ಈ ಭರ್ಜರಿ ಸಕ್ಸಸ್​ ಲಭಿಸಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ.

ಚಿತ್ರಮಂದಿರಗಳತ್ತ ಕೈಬೀಸಿ ಕರೆದ ಪ್ರೇಮದ ಊರಲಿ...

ಕಳೆದ ಕೆಲವು ವರ್ಷಗಳಿಂದ ಸಿನಿಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾಗಳನ್ನು ವೀಕ್ಷಿಸದ ಕಾರಣ, ಕೆಲವು ಚಿತ್ರಮಂದಿರಗಳು ವಿಪರೀತ ನಷ್ಟಗಳನ್ನು ಅನುಭವಿಸಿ, ಸಂಪೂರ್ಣವಾಗಿ ಬೀಗ ಹಾಕಿಕೊಂಡು ಹೋಗಿವೆ. ಇದರಿಂದ, ಹಲವು ಹೆಸರಾಂತ ಹಳೆಯ ಚಿತ್ರಮಂದಿರಗಳು ತನ್ನ ಪಯಣಕ್ಕೆ ಶಾಶ್ವತವಾಗಿ ಗುಡ್​ಬೈ ಹೇಳಿವೆ. ಇದು ಚಿತ್ರರಂಗದ ಕಲಾವಿದರಿಗೆ ವಿಪರೀತ ನೋವು ತಂದಿದೆ. ಮತ್ತೊಂದೆಡೆ, ಕಳೆದ ವರ್ಷ ತೆರೆಕಂಡ 'ಸು ಫ್ರಮ್​ ಸೋ' ನಂತರ ಈ ವರ್ಷ 'ಪ್ರೇಮದ ಊರಲಿ' ಚಿತ್ರವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಚಿತ್ರಮಂದಿರಗಳಿಗೆ ಕರೆತರುತ್ತಿರುವುದು ನಿಜಕ್ಕೂ ಗಮನಾರ್ಹ. ಅದರಲ್ಲೂ, 50 ದಿನಗಳತ್ತ ಮುಖ ಮಾಡುತ್ತಿರುವ ಚಿತ್ರವು ಇಂದಿಗೂ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​ಗಳಲ್ಲಿ ತುಂಬಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದು ಹೀಗೆ ಮುಂದುವರಿದರೆ, ಇತಿಹಾಸ ಹೊಂದಿರುವ ಹಳೆಯ ಚಿತ್ರಮಂದಿರಗಳಿಗೆ ಇನ್ನಷ್ಟು ಲೈಫ್​ಲೈನ್​ ಕೊಟ್ಟಂತಾಗಲಿದೆ.

ಚಿತ್ರರಂಗಕ್ಕೆ ಹೊಸ ಆಯಾಮ

ಪ್ರಸ್ತುತ ಕನ್ನಡ ಸೇರಿದಂತೆ ತಮಿಳು, ಹಿಂದಿ ಮತ್ತು ತೆಲುಗು ಚಿತ್ರರಂಗಗಳು ಹೆಚ್ಚಾಗಿ ಈ ಆ್ಯಕ್ಷನ್​, ಮಾಸ್​, ಹಾರರ್​ ಸ್ಟೋರಿಗಳ ಹಿಂದೆ ಓಡುತ್ತಿವೆ. ಇದು ಅಗತ್ಯವೇ ನಿಜ. ಹಾಗಂತ, ಡಾರ್ಕ್​ ಆ್ಯಕ್ಷನ್​ ಸೇರಿದಂತೆ ಮಾಸ್​ ಆಧಾರಿತ ಕಥೆಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರ ಮುಂದಿಡುವುದು ಒಪ್ಪುವಂತದ್ದಲ್ಲ. ಇದು ಕಂಪ್ಲೀಟ್​ ಬೋರ್​​ಡಮ್​ ಎನಿಸಿಬಿಡುತ್ತದೆ. ಒಂದೊಳ್ಳೆ ಸಂದೇಶವುಳ್ಳ ಪ್ರೇಮಕಥೆ, ದೈನಂದಿನ ಬದುಕಿನಲ್ಲಿ ನಡೆಯುವ ಸಣ್ಣ ಸಣ್ಣ ಘಟನೆಗಳು, ಮೌಲ್ಯಾಧರಿತ ವಿಷಯಗಳನ್ನು ಹೆಕ್ಕಿ, ಅದನ್ನೇ ತೆರೆಯ ಮೇಲೆ ತೋರಿಸುವಂತ ಸಿನಿಮಾಗಳು ಈಗಾಗಲೇ ಸಿನಿಪ್ರಿಯರಿಗೆ ಭಾರಿ ಮೆಚ್ಚುಗೆ ಪಡೆದು, ಬಾಕ್ಸ್ ಆಫೀಸ್​ನಲ್ಲಿ ಮಾತ್ರವಲ್ಲ, ರಾಷ್ಟ್ರಪ್ರಶಸ್ತಿಗಳನ್ನೂ ಬಾಚಿಕೊಂಡಿವೆ ಎಂಬುದು ಗಮನಾರ್ಹ. ಸದ್ಯ ಪ್ರೇಮದ ಊರಲಿ ಈಗ ಸ್ಯಾಂಡಲ್​ವುಡ್​ ಸೇರಿ ಉಳಿದ ಚಿತ್ರರಂಗಕ್ಕೂ ಹೊಸ ಆಯಾಮವನ್ನೇ ನೀಡಿದೆ.