ಬೆಂಗಳೂರು: ಸ್ಯಾಂಡಲ್ವುಡ್ ನಟಿ ಅಮೂಲ್ಯ, ಜಗದೀಶ್ ಅವರನ್ನು ವರಿಸಿ ಮೇ 12ಕ್ಕೆ ಮೂರು ವರ್ಷಗಳು ಕಳೆದವು. ಆ ವಾರ್ಷಿಕೋತ್ಸವದ ನಿಮಿತ್ತ ವಿಭಿನ್ನ ಕಾರ್ಯವೊಂದಕ್ಕೆ ಈ ಜೋಡಿ ಕೈ ಹಾಕಿ, ಹಲವರಿಂದ ಆಶೀರ್ವಾದ ಪಡೆದುಕೊಂಡಿದೆ. ಅಂದರೆ, ಕರೊನಾ ಲಾಕ್ಡೌನ್ ನಡುವೆಯೂ ಬೆಂಗಳೂರಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ 50ಕ್ಕೂ ಅಧಿಕ ಗರ್ಭಿಣಿಯರಿಗೆ ಸೀಮಂತ ಮಾಡಿ ಸಂಭ್ರಮಿಸಿದ್ದಾರೆ ಅಮೂಲ್ಯ ಮತ್ತು ಜಗದೀಶ್.
ಗರ್ಭಿಣಿಯರಿಗೆ ಸೀಮಂತ ಮಾಡುವುದರ ಜತೆಗೆ, ಮೆಟರ್ನಿಟಿ ನ್ಯೂಟ್ರಿಷಿಯನ್ ಕಿಟ್ ಸಹ ನೀಡಿ ಬಂದಿದ್ದಾರೆ. ದಾದಿಯರ ದಿನದ ಪ್ರಯುಕ್ತ ಕರೊನಾ ವಾರಿಯರ್ಸ್ ಎಂದೇ ಕರೆಸಿಕೊಳ್ಳುವ ನರ್ಸ್ಗಳನ್ನೂ ಸನ್ಮಾನಿಸಿ ಗೌರವಿಸಿದ್ದಾರೆ. ಲಾಕ್ಡೌನ್ ಶುರುವಾದಾಗಿನಿಂದ ಒಂದಲ್ಲ ಒಂದು ರೀತಿ ಸಹಾಯ ಮಾಡುತ್ತ ಬಂದಿರುವ ಅಮೂಲ್ಯ ಮತ್ತು ಪತಿ ಜಗದೀಶ್, ರಾಜರಾಜೇಶ್ವರ ನಗರದ ಸುತ್ತಲಿನ ಹಲವು ಪ್ರದೇಶಗಳಿಗೆ ತೆರಳಿ ಹಸಿದವರಿಗೆ ದಿನಸಿ ವಿತರಣೆಯನ್ನೂ ಮಾಡಿದ್ದರು. ಇದೀಗ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ ಗರ್ಭಿಣಿಯರಿಗೆ ಸೀಮಂತ ಮಾಡಿ ಸಂಭ್ರಮಿಸಿದ್ದಾರೆ.