ಸಿನಿವಾಣಿ

ಅದೇ ಪ್ರೀತಿ ಹೊಸ ರೀತಿ; ಪ್ರೇಮಂ ಪೂಜ್ಯಂ...

  • ಚಿತ್ರ: ಪ್ರೇಮಂ ಪೂಜ್ಯಂ
  • ನಿರ್ದೇಶನ: ಡಾ.ಎಸ್. ರಾಘವೇಂದ್ರ
  • ನಿರ್ಮಾಣ: ಡಾ.ಎಸ್. ರಾಘವೇಂದ್ರ
  • ತಾರಾಗಣ: ಪ್ರೇಮ್ ಬೃಂದಾ ಆಚಾರ್ಯ, ಐಂದ್ರಿತಾ ರೇ, ಆನಂದ್, ಅವಿನಾಶ್, ಅನು ಪ್ರಭಾಕರ್ ಮುಂತಾದವರು..

| ಚೇತನ್ ನಾಡಿಗೇರ್

‘ಇದು ದೇವತೆ ಮತ್ತು ಭಕ್ತನ ಮಧ್ಯೆ ಇರೋ ಸಂಬಂಧ ...’ಅವನು ಹೇಳುವವರೆಗೂ ಆಕೆಗೂ ಒಂದು ಸ್ಪಷ್ಟತೆ ಇರುವುದಿಲ್ಲ. ತಮ್ಮಿಬ್ಬರ ಸಂಬಂಧಕ್ಕೆ ಏನೆಂದು ಕರೆಯಬೇಕು ಎಂದು ಅವಳಿಗೂ ಗೊತ್ತಿರುವುದಿಲ್ಲ. ಏಕೆಂದರೆ, ಅವಳು ಹ್ಯಾಂಡ್​ಶೇಕ್ ಕೊಟ್ಟರೆ, ಅವನು ಹೃದಯ ಮುಟ್ಟಿಕೊಳ್ಳುತ್ತಾನೆ. ಅವಳನ್ನು ಏಂಜಲ್ ಎಂದು ಕರೆಯುತ್ತಾನೆ. ಅವಳಿಗೆ ದೇವತೆಯ ತರಹ ರೆಕ್ಕೆಗಳಿವೆ ಎಂದು ಕಲ್ಪಿಸಿಕೊಳ್ಳುತ್ತಾನೆ. ಯಾರೂ ಕೊಡದಷ್ಟು ಗೌರವ ಕೊಡುತ್ತಾನೆ. ಇಷ್ಟಕ್ಕೂ ಅವನಿಗೆ ತನ್ನ ಮೇಲಿರುವ ಭಾವನೆ ಯಾವುದು? ತಮ್ಮಿಬ್ಬರ ನಡುವಿನ ಸಂಬಂಧ ಏನು? ‘ಪ್ರೇಮಂ ಪೂಜ್ಯಂ’ ಹೆಸರೇ ಹೇಳುವಂತೆ ಪ್ರೀತಿ ಪೂಜನೀಯ ಎಂದು ಹೇಳುವ ಚಿತ್ರ.

ಇಲ್ಲಿ ನಾಯಕ, ನಾಯಕಿಯನ್ನು ಯಾವುದೇ ಅಪೇಕ್ಷೆ ಇಲ್ಲದೆ ಪ್ರೀತಿಸುತ್ತಾನೆ. ತಮ್ಮಿಬ್ಬರ ಧರ್ಮ-ಅಂತಸ್ತು ಬೇರೆ ಎಂದು ಗೊತ್ತಿದ್ದರೂ ಇಷ್ಟಪಡುತ್ತಾನೆ. ಅವಳು ತನಗೆ ಸಿಗುವುದಿಲ್ಲ ಎಂಬ ಅರಿವಿದ್ದರೂ ಅವಳನ್ನು ಆರಾಧಿಸುತ್ತಾನೆ. ಆಕೆ ಎಲ್ಲಾದರೂ ಇರಲಿ, ಹೇಗಾದರೂ ಇರಲಿ, ಒಟ್ಟಿನಲ್ಲಿ ಚೆನ್ನಾಗಿರಲಿ ಎಂದು ಹಾರೈಸುತ್ತಾನೆ. ತನ್ನ ನಿಷ್ಕಲ್ಮಶ ಪ್ರೀತಿಯಿಂದ ಎಲ್ಲರಿಗೂ ಸ್ಪೂರ್ತಿಯಾಗುತ್ತಾನೆ. ಎಲ್ಲಾ ಸರಿ, ಅವನ ಪ್ರೀತಿ ಫಲಿಸುತ್ತದಾ? ಅದನ್ನು ಚಿತ್ರದಲ್ಲೇ ನೋಡಬೇಕು.

ಪ್ರೇಮ್ ಇದುವರೆಗೂ ಲವ್​ಸ್ಟೋರಿ ಇರುವ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಪ್ರೇಮಂ ಪೂಜ್ಯಂ’ ಕಥೆ ಮತ್ತು ಪಾತ್ರ ಎರಡೂ, ಅವೆಲ್ಲಕ್ಕಿಂತ ವಿಭಿನ್ನವಾಗಿದೆ. ಇಲ್ಲಿ ಪ್ರೀತಿ ಇದೆ, ಸ್ನೇಹವಿದೆ, ಕಣ್ಸೆಳೆಯುವ ದೃಶ್ಯಗಳಿವೆ, ಮನಸೆಳೆಯುವ ಹಾಡುಗಳಿವೆ. ಆದರೆ, ದೊಡ್ಡ ಸಮಸ್ಯೆ ಎಂದರೆ, ಚಿತ್ರದ ಅವಧಿ. ಚಿತ್ರದ ಮೊದಲಾರ್ಧ ಸರಿಯುವುದು ಗೊತ್ತಾಗುವುದಿಲ್ಲ. ದ್ವಿತೀಯಾರ್ಧದಲ್ಲಿ ಚಿತ್ರ ಬಹಳ ನಿಧಾನವಾಗುತ್ತದೆ, ಕೆಲವು ಕಡೆ ಎಳೆದಂತಾಗಿದೆ. ಒಂದಿಷ್ಟು ದೃಶ್ಯಗಳಿಗೆ ಮತ್ತು ಹಾಡುಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರ ಪ್ರೇಕ್ಷಕರಿಗೆ ಇನ್ನಷ್ಟು ಇಷ್ಟವಾಗುತ್ತಿತ್ತೇನೋ? ಪ್ರೇಮ್ ಈ ಪಾತ್ರವನ್ನು ಜೀವಿಸಿದ್ದಾರೆ.

ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಇಲ್ಲಿ ಬೇರೆಯ ಪ್ರೇಮ್ ಕಾಣುತ್ತಾರೆ. ಬೃಂದಾ, ‘ಏಂಜೆಲ್’ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆನಂದ್, ಸಾಧು ಕೋಕಿಲ, ಅನು ಪ್ರಭಾಕರ್, ಅವಿನಾಶ್, ಮಾಳವಿಕಾ ಎಲ್ಲರೂ ಅಚ್ಚುಕಟ್ಟು. ಚಿತ್ರದ ಇನ್ನೊಂದು ವಿಶೇಷತೆಯೆಂದರೆ, ನಿರ್ದೇಶಕರೇ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ. ಅವರೆಡೂ ಕಿವಿಗೆ ಹಿತವಾಗಿರುವುದಷ್ಟೇ ಅಲ್ಲ, ನವೀನ್ ಕುಮಾರ್ ಛಾಯಾಗ್ರಹಣದಿಂದ ಕಣ್ಣಿಗೂ ಹಿತವಾಗಿದೆ. ಪ್ರೇಮಕಥೆಗಳಲ್ಲಿ ಕ್ರೌರ್ಯ, ಹಿಂಸೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಇದೊಂದು ಪ್ರೇಮಕಥೆ ಸದಭಿರುಚಿಯಿಂದ ತುಂಬಿರುವುದಷ್ಟೇ ಅಲ್ಲ, ಚಿತ್ರ ನೋಡುವವರಿಗೆ ಸ್ಪೂರ್ತಿಯಾದರೆ ಅಷ್ಟೇ ಸಾಕು.