ಸಿನಿವಾಣಿ

Jigar Movie Review ; ಜೀವ'ನ ಜೀವನ, ಕರಾವಳಿಯ ಕರಾಳ ಕಥನ

ಚಿತ್ರ: ಜಿಗರ್​
ನಿರ್ದೇಶನ: ಸುರೇಶ್​ ಕುಂದರ್​
ನಿರ್ಮಾಣ: ಯುಕೆ ಪ್ರೊಡಕ್ಷನ್ಸ್​
ತಾರಾಗಣ: ಪ್ರವಿಣ್​ ತೇಜ್​, ವಿಜಯಶ್ರೀ ಕಲಬುರ್ಗಿ, ಬಾಲ ರಾಜವಾಡಿ, ವಿನಯಾ ಪ್ರಸಾದ್​, ಯಶ್​ ಶೆಟ್ಟಿ ಮುಂತಾದವರು
ಸ್ಟಾರ್​ : 3

| ಹರ್ಷವರ್ಧನ್​ ಬ್ಯಾಡನೂರು

"ಈ ರೌಡಿಸಂ ಒಂಥರಾ ನೀರಿಂದ ಹೊರಗೆ ಬಿದ್ದಿರೋ ಮೀನಿದ್ದಂಗೆ. ಜೀವನಾನೇ ಹಾಳಾಗೋಗುತ್ತೆ. ಮತ್ತೆ ರೌಡಿಸಂ ಕಡೆ ಹೋಗೋದ್​ ಬೇಡ' ಎಂದು ಗೆಳೆಯನಿಗೆ ಹೇಳುತ್ತಾನೆ ಜೀವ (ಪ್ರವಿಣ್​). ಬೆಂಗಳೂರಿನಲ್ಲಿ ಬೈಕ್​ ಲೋನ್​ ರಿಕವರಿ ಏಜೆಂಟ್​ ಆಗಿ ಕೆಲಸ ಮಾಡಿಕೊಂಡಿದ್ದ ಜೀವನಿಗೆ ಊರಿನಿಂದ ೋನ್​ ಮಾಡುವ ಗೆಳೆಯ, "ಮುನ್ನ ಕಡೆಯವರು ರಾಮುನ ಕೊಂದುಬಿಟ್ಟಿದ್ದಾರೆ ಕಣೋ' ಅಂತಾನೆ. ಕೊನೆಯ ಬಾರಿಗೆ ಗೆಳೆಯನ ದರ್ಶನ ಪಡೆಯಲು ಊರಿಗೆ ಬರುವ ಜೀವನ ಕರಾಳ ಇತಿಹಾಸದ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಗೆಳೆಯನ ಹತ್ಯೆಗೆ ಪ್ರತಿಕಾರ ತೆಗೆದುಕೊಳ್ಳುವ ಮಾತು ಬಂದಾಗ ಜೈಲಿಗೆ ಹೋಗಿಬಂದಿರುವ ಜೀವ, ಜೀವನ ಮುಖ್ಯ ಅಂತ ಹಿಂಜರಿಯುತ್ತಾನೆ. ಅದೇ ಸಮಯದಲ್ಲಿ ಜೀವನಿಗೆ ರಾ (ವಿಜಯಶ್ರೀ) ಸಿಗುತ್ತಾಳೆ. ಪರಿಚಯ, ಪ್ರೀತಿಗೆ ತಿರುಗುತ್ತದೆ. ರಾ ಜೀವನ ಜೀವವಾಗುತ್ತಾಳೆ. ಮುಂದೆ? ಜೀವ ಸೇಡು ತೀರಿಸಿಕೊಳ್ಳುತ್ತಾನಾ? ಪ್ರೀತಿ ಪಡೆಯುತ್ತಾನಾ? ಯಾವುದೂ ಬೇಡ ಅಂತ ಬೆಂಗಳೂರು ಸೇರಿಕೊಳ್ಳುತ್ತಾನಾ? "ಜಿಗರ್​' ನೋಡಿ.


ಬೆಂಗಳೂರಿನಲ್ಲಿ ಪ್ರಾರಂಭವಾಗುವ ಕಥೆ ಕರಾವಳಿ ಸೇರುತ್ತದೆ. ಕುಂದಾಪುರ ಕನ್ನಡ, ಮೀನು ಟೆಂಡರ್​, ಅಲ್ಲಿನ ರಾಜಕೀಯವನ್ನೂ ಅಲ್ಲಲ್ಲಿ ಕಾಣಬಹುದು. 122 ನಿಮಿಷಗಳ ಸಿನಿಮಾ ಹೆಚ್ಚು ಬೋರ್​ ಹೊಡೆಸದೇ, ಒಂದೇ ವೇಗದಲ್ಲಿ ನೋಡಿಸಿಕೊಂಡು ಹೋಗುತ್ತದೆ. ನಿಧಾನವಾಯಿತು ಎನ್ನುತ್ತಿರುವಾಗಲೇ ಊಹಿಸಬಹುದಾದ ಕೆಲ ಟ್ವಿಸ್ಟ್​ಗಳೂ ಇವೆ. ಜೀವ ಪಾತ್ರಕ್ಕೆ ಪ್ರವಿಣ್​ ತೇಜ್​ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. ಮಾಸ್​ ಲುಕ್​ನಲ್ಲಿ, ಭರ್ಜರಿ ಆ್ಯಕ್ಷನ್​ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ಹೊಸ ಪ್ರತಿಭೆ ವಿಜಯಶ್ರೀ ಕಲಬುರ್ಗಿ ನಟನೆಯಲ್ಲಿ ಸ್ವಲ್ಪ ಪಳಗಿದರೆ ಉತ್ತಮ ಭವಿಷ್ಯವಿದೆ. ಉಳಿದಂತೆ ಯಶ್​ ಶೆಟ್ಟಿ, ವಿನಯಾ ಪ್ರಸಾದ್​, ಬಾಲರಾಜವಾಡಿ ಸೇರಿ ಉಳಿದ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ರಿತ್ವಿಕ್​ ಮುರಳೀಧರ್​ ಸಂಗೀತದಲ್ಲಿ "ನಕ್ಷತ್ರ ಒಂದು', "ಸುಮ್ಮನೇ ನಗಬಹುದೇ ಹುಡುಗಿ' ಹಾಡುಗಳು ಅಂದವಾಗಿವೆ. ಕರಾವಳಿಯ ಬೀಚು, ಪ್ರಕೃತಿ ಸೌಂದರ್ಯ, ಆ್ಯಕ್ಷನ್​ ಸನ್ನಿವೇಶಗಳು, ನಾಯಕನ ಬಿಲ್ಡಪ್​ ಎಲ್ಲವನ್ನೂ ಛಾಯಾಗ್ರಾಹಕ ಶಿವಸೇನಾ ಕ್ಯಾಮರಾದಲ್ಲಿ ಚೆನ್ನಾಗಿ ಸೆರೆಹಿಡಿದಿದ್ದಾರೆ. ರೌಡಿಸಂ ಬೇಡ ಅಂತ ಬಿಟ್ಟು ಬದುಕು ಕಟ್ಟಿಕೊಳ್ಳಲು ಹೊರಟ ಯುವಕನೊಬ್ಬ ಪರಿಸ್ಥಿತಿಯ ಕೈಗೊಂಬೆಯಾಗುವ ಅದೇ ಹಳೇ ಕಥೆ ಅಂತನ್ನಿಸಿದರೂ, ಅದನ್ನು ಸೂರಿ ಕುಂದರ್​ ಕಟ್ಟಿಕೊಟ್ಟಿರುವ ರೀತಿ ವಿಭಿನ್ನವಾಗಿದೆ. ಹೀಗಾಗಿ "ಜಿಗರ್​' ಒಮ್ಮೆ ನೋಡಬಹುದಾದ ಸಿನಿಮಾ.