ಸಿನಿವಾಣಿ

Kabandha Review ; ಕೃಷಿ ಹಿನ್ನೆಲೆಯಲ್ಲೊಂದು ಹಾರರ್​ ಕಥೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಸಾಮಾನ್ಯವಾಗಿ ಹಾರರ್​ ಥ್ರಿಲ್ಲರ್​ಗಳು ಅಂದರೆ ಭೂತ ಬಂಗಲೆಯಲ್ಲಿ, ಕಾಡು ಅಥವಾ ಯಾವುದೋ ರ್ನಿಜನ ಪ್ರದೇಶದಲ್ಲಿ ನಡೆಯುವ ಕಥೆಯಾಗಿರುತ್ತವೆ. ಆದರೆ, ಆ ಸಿದ್ದಸೂತ್ರವನ್ನು ಬದಿಗಿಟ್ಟು ಜನರಲ್ಲಿ ರಸಗೊಬ್ಬರ, ರಾಸಾಯನಿಕ ಮತ್ತು ಕೀಟನಾಶಕಗಳ ಬಗ್ಗೆ ಅರಿವು ಮೂಡಿಸಲು ಕೃಷಿ ಹಿನ್ನೆಲೆಯಲ್ಲೊಂದು ಹಾರರ್​ ಥ್ರಿಲ್ಲರ್​ ಹೇಳುವ ಉತ್ತಮ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸತ್ಯನಾಥ್​.

"ಕಬಂಧ' ಎರಡು ಕಾಲಟ್ಟಗಳಲ್ಲಿ ನಡೆಯುವ ಕಥೆ. ರಾಮೋಹಳ್ಳಿಯಲ್ಲಿ ಬೆಳೆಗೆ ರಾಸಾಯನಿಕ ಸಿಂಪಡಿಸಲು ಮಾಲೀಕ (ಅವಿನಾಶ್​) ಹೇಳುತ್ತಾರೆ. ಅದಕ್ಕೆ ವಿರೋಧಿಸುವ ಕೂಲಿಯಾಳು ಹನುಮ (ಕಿಶೋರ್​) ಕೊನೆಗೆ ಮಾಲೀಕನ ಮಾತಿಗೆ ಮಣಿದು ರಾಸಾಯನಿಕ ಸಿಂಪಡಿಸುತ್ತಾನೆ. ಮಾಲೀಕನ ತಂಗಿಯ ಮಗ ನಚಿಕೇತ್​ (ಪ್ರಸಾದ್​ ವಸಿಷ್ಠ) ಅದನ್ನು ವಿರೋಧಿಸಬೇಕೆಂದಿದ್ದರೂ, ಮಾವನಿಗೆ ಹೆದರಿ ಮೌನವಾಗುತ್ತಾನೆ. ಅದಾಗಿ ಕೆಲ ದಿನಗಳಲ್ಲೇ ನಚಿಕೇತ್​ ಊರು ಬಿಡುತ್ತಾನೆ. 11 ವರ್ಷಗಳ ಬಳಿಕ ಆತ ಮತ್ತೆ ರಾಮೋಹಳ್ಳಿಗೆ ಮರಳಬೇಕಾಗುತ್ತದೆ. ಆತ ಊರು ಬಿಡಲು ಕಾರಣವೇನು? ಮತ್ತೆ ಊರಿಗೆ ವಾಪಸ್ಸಾಗಿದ್ದೇಕೆ? ಮುಂದೇನಾಗುತ್ತೆ? ಎಂಬುದೇ "ಕಬಂಧ'.

ಅವಿನಾಶ್​ ಅಬ್ಬರಿಸುತ್ತಾರೆ, ಕಿಶೋರ್​ ಕಾಡುತ್ತಾರೆ, ನಾಯಕನಾಗಿ ಪ್ರಸಾದ್​ ವಸಿಷ್ಠ ಮಿಂಚಿದ್ದಾರೆ. ಪ್ರಶಾಂತ್​ ಸಿದ್ದಿ ನಗಿಸುತ್ತಾರೆ. ನಾಯಕಿ ಪ್ರಿಯಾಂಕಾ, ಛಾಯಾಶ್ರೀ, ಯೋಗರಾಜ್​ ಭಟ್​ ಅಚ್ಚುಕಟ್ಟಾಗಿ ಪಾತ್ರ ನಿಭಾಯಿಸಿದ್ದಾರೆ. ಕೇವಲ 124 ನಿಮಿಷಗಳ ಸಿನಿಮಾ ಆದರೂ, ಕೆಲವೆಡೆ ನಿಧಾನ ಎನಿಸುತ್ತದೆ. ಆದರೆ, ಉದ್ದೇಶವನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಚಿತ್ರತಂಡ ಗೆದ್ದಿದೆ. ಕೀಟನಾಶಕ, ರಸಗೊಬ್ಬರ ಬಳಕೆಯಿಂದ ಕೃಷಿಯಿಂದಲೇ ಗಾಳಿ, ನೀರು, ಆಹಾರ ಮಲಿನವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿಸುತ್ತದೆ. ಕೃಷಿಕರ ಜವಾಬ್ದಾರಿ ಹೆಚ್ಚಿಸುವ, ಸಾಮಾನ್ಯ ಜನರ ಕಣ್ತೆರೆಸುವ ಚಿತ್ರವಿದು. ಒಮ್ಮೆ ನೋಡಲಡ್ಡಿಯಿಲ್ಲ.